ಹರಪನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಹಿಸಿದ ಕೂಲಿಯ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಆಡಳಿತ ಸೌಧದ ಆವರಣದ ವರೆಗೂ ಮೆರವಣಿಗೆ ನಡೆಸಲಾಯಿತು.
‘ತಾಲ್ಲೂಕಿನಲ್ಲಿ 66 ಸಾವಿರ ಕುಟುಂಬಗಳು ಉದ್ಯೋಗ ಖಾತ್ರಿ ಅವಲಂಬಿಸಿವೆ. ನಿತ್ಯ 34 ಸಾವಿರ ಕುಟುಂಬ ಕೆಲಸ ಮಾಡುತ್ತಿವೆ. ಆದರೆ ಏಪ್ರಿಲ್ 22ರಿಂದ ಕೂಲಿ ಹಣ ಪಾವತಿಸದ ಪರಿಣಾಮ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.
‘11 ಸಾವಿರ ಕುಟುಂಬಗಳಿಗೆ 650 ನಿಧಿ ವರ್ಗಾವಣೆ ಆದೇಶ (ಎಫ್‍ಟಿಒ) ಬಾಕಿ ಇವೆ. ಕೆಲಸ ಮಾಡಿದ 15 ದಿನದೊಳಗಾಗಿ ಕೂಲಿ ಪಾವತಿಸುವ ನಿಯಮವಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಆನ್‍ಲೈನ್ ಕಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳಿಗೆ ಮ್ಯಾನುವಲ್ ಕಾರ್ಡ್ ವಿತರಿಸಬೇಕು. 200 ಮಾನವ ದಿನಗಳಿಗೆ ಕೂಲಿ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಬಳಿಗನೂರು ಕೊಟ್ರೇಶ್, ರಮೇಶನಾಯ್ಕ, ಅನಿಲ್ ಕುಮಾರ, ಭಾಗ್ಯಮ್ಮ, ನೀಲಮ್ಮ, ಅಭಿಷೇಕ, ಹಾವೇರಿ ದೊಡ್ಡ ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.