ADVERTISEMENT

ಹೂವಿನಹಡಗಲಿ | ಧರ್ಮಕರ್ತ–ಗೊರವಯ್ಯ ನಡುವೆ ಸಂಘರ್ಷ

ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 4:13 IST
Last Updated 28 ಫೆಬ್ರುವರಿ 2024, 4:13 IST
<div class="paragraphs"><p>ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಕಂಚವೀರರು ಭಗಣಿ ಗೂಟ ಬಡಿದುಕೊಳ್ಳುವ ಪವಾಡ ನಡೆಸಿದರು</p></div>

ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಕಂಚವೀರರು ಭಗಣಿ ಗೂಟ ಬಡಿದುಕೊಳ್ಳುವ ಪವಾಡ ನಡೆಸಿದರು

   

ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಮೈಲಾರ ಸುಕ್ಷೇತ್ರದ ಧರ್ಮಕರ್ತರು ಮತ್ತು ಕಾರ್ಣಿಕದ ಗೊರವಯ್ಯ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ.

ಕಳೆದ 15 ವರ್ಷಗಳಿಂದ ಸುಕ್ಷೇತ್ರದಲ್ಲಿ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಿವೆ. ಕೆಲ ವರ್ಷಗಳಿಂದ ಜಾತ್ರಾ ಮುನ್ನ ದಿನಗಳಲ್ಲಿ ತಲೆದೋರುತ್ತಿದ್ದ ವಿವಾದ, ಈ ಬಾರಿ ಕಾರ್ಣಿಕ ನಂತರ ಸ್ಫೋಟಗೊಂಡಿದೆ.

ADVERTISEMENT

‘ಗೊರವಯ್ಯ ರಾಮಣ್ಣ ನುಡಿದ ಈ ವರ್ಷದ ಕಾರ್ಣಿಕ ಉಕ್ತಿ ಮೈಲಾರಲಿಂಗನ ನುಡಿ ಅಲ್ಲ, ಅದು ಗೊರವಯ್ಯನ ವೈಯಕ್ತಿಕ ನುಡಿ. ಅದು ನಿಜವಾಗುವುದಿಲ್ಲ. ಸುಕ್ಷೇತ್ರದ ಸಂಪ್ರದಾಯ ಪಾಲಿಸದೇ ಉಕ್ತಿ ನುಡಿದಿದ್ದಾರೆ’ ಎಂದು ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಗೊರವಯ್ಯನ ಬೆಂಬಲಿಗರು ಧರ್ಮಕರ್ತರ ಈ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ.

ನಾಡಿನ ಅನೇಕ ಕಡೆ ಮೈಲಾರಲಿಂಗೇಶ್ವರ ದೇವಾಲಯಗಳಿದ್ದರೂ ಮೈಲಾರ ಸುಕ್ಷೇತ್ರವೇ ಮೂಲ ನೆಲೆಯಾಗಿದೆ. ಪುರಾಣ ಪ್ರಸಿದ್ಧ ಡೆಂಕನಮರಡಿಯಲ್ಲಿ ಜರುಗುವ ಕಾರ್ಣಿಕ ನುಡಿಯನ್ನು ಭಕ್ತರು ಭವಿಷ್ಯವಾಣಿ ಎಂದೇ ನಂಬಿದ್ದಾರೆ. ಮಳೆ, ಬೆಳೆ, ರಾಜಕೀಯ, ಕೃಷಿ, ವಾಣಿಜ್ಯ, ಸಾಮಾಜಿಕ ಕ್ಷೇತ್ರಗಳಿಗೆ ಈ ನುಡಿಯನ್ನು ತಾಳೆಹಾಕಿ ವ್ಯಾಖ್ಯಾನಿಸಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಕಾರ್ಣಿಕ ನುಡಿಗೂ, ದೇಶ, ರಾಜ್ಯದಲ್ಲಿ ಘಟಿಸಿದ ಬೆಳವಣಿಗೆಗಳಿಗೂ ಸಾಮ್ಯತೆ ಇರುವುದನ್ನು ಹಿರಿಯರು ಉದಾಹರಿಸುತ್ತಾರೆ.

ಕಾರ್ಣಿಕ ಗೊರವಯ್ಯ ನೇಮಕ ವಿಚಾರವಾಗಿ ಧರ್ಮಕರ್ತರು ಮತ್ತು ಗೊರವಯ್ಯ ನಡುವೆ ಮನಸ್ತಾಪವಿದ್ದು. ಇಬ್ಬರೂ ನ್ಯಾಯಾಲಯ ಮೆಟ್ಟಿಲೇರಿದ್ದು, ವಿವಾದ ಇತ್ಯರ್ಥವಾಗಿಲ್ಲ.

‘ಕಾರ್ಣಿಕೋತ್ಸವ ಮುನ್ನ 11 ದಿನಗಳ ಕಾಲ ಗೊರವಯ್ಯ ವ್ರತ ಆಚರಿಸಬೇಕು. ಡೆಂಕನಮರಡಿಯಲ್ಲೇ ಇದ್ದು, ಭಕ್ತರು ನೀಡುವ ಹಣ್ಣು, ಹಂಪಲು ಮಾತ್ರ ಸೇವಿಸಬೇಕು. ಕಾರ್ಣಿಕ ನುಡಿಸೇವೆಗೆ ಅಣಿಗೊಳ್ಳುವ ಮುನ್ನ ಗೊರವಯ್ಯ ಧಾರ್ಮಿಕ ವಿಧಿವಿಧಾನ ಪೂರೈಸಿ ಬಿಲ್ಲು ಏರಬೇಕೆಂಬ ಸಂಪ್ರದಾಯವಿದೆ. ಆದರೆ, ಗೊರವಯ್ಯ ಅದನ್ನು ಪಾಲಿಸುತ್ತಿಲ್ಲ’ ಎನ್ನಲಾಗುತ್ತಿದೆ. ಈ ವಿಚಾರವಾಗಿ ಇಬ್ಬರ ನಡುವಿನ ಪ್ರತಿಷ್ಠೆಯ ಸಂಘರ್ಷದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ಮಹತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬುದು ಭಕ್ತರ ಅನಿಸಿಕೆ.

ರಾಮಣ್ಣ ಗೊರವಯ್ಯ
ಸುಕ್ಷೇತ್ರ ಧಾರ್ಮಿಕ ಪರಂಪರೆಯನ್ನು ಗೊರವಯ್ಯ ಪಾಲಿಸುತ್ತಿಲ್ಲ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟ ನಡೆಸುತ್ತೇವೆ
–ವೆಂಕಪ್ಪಯ್ಯ ಒಡೆಯರ್, ಧರ್ಮಕರ್ತರು ಮೈಲಾರ
ನಮ್ಮ ಪೂರ್ವಿಕರಂತೆ ಎಲ್ಲ ನಿಯಮ ಅನುಸರಿಸಿ ಭಗವಂತನ ವಾಣಿ ನುಡಿದಿರುವೆ. ಧರ್ಮಕರ್ತರು ಎಷ್ಟರಮಟ್ಟಿಗೆ ಸಂಪ್ರದಾಯ ಪಾಲಿಸುತ್ತಾರೆ ಎಂಬುದು ಗೊತ್ತಿದೆ.
–ರಾಮಣ್ಣ, ಕಾರ್ಣಿಕದ ಗೊರವಯ್ಯ ಮೈಲಾರ

ಸುಕ್ಷೇತ್ರ ಪಾವಿತ್ರ್ಯತೆ ಧಕ್ಕೆಯಾಗದಿರಲಿ

‘ಧರ್ಮಕರ್ತರು ಗೊರವಯ್ಯ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು. ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಮೈಲಾರಲಿಂಗೇಶ್ವರ ಸ್ವಾಮಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಅರಿತು ಇಬ್ಬರು ಸುಕ್ಷೇತ್ರದ ಸಂಪ್ರದಾಯಗಳನ್ನು ಪಾಲಿಸಬೇಕು. ಮೈಲಾರಲಿಂಗನ ಕಾರ್ಣಿಕ ಪಾವಿತ್ರ್ಯತೆಗೆ ಧಕ್ಕೆ ತರಬಾರದು’ ಎಂದು ಹೊಳಲು ಗ್ರಾಮದ ಭಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.