ಕೂಡ್ಲಿಗಿ: ರಾಜ್ಯದ ದೊಡ್ಡ ತಾಲ್ಲೂಕುಗಳಲ್ಲಿ ಒಂದಾದ, ಹಿಂದುಳಿದ ತಾಲ್ಲೂಕು ಎಂಬ ಕುಖ್ಯಾತಿಗೆ ಪಾತ್ರವಾಗಿರುವ ತಾಲ್ಲೂಕಿನಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಖಾಸಗಿ ಕಟ್ಟಡಗಳೇ ಆಸರೆಯಾಗಿವೆ.
ಸುಮಾರು ₹10 ಕೋಟಿ ವೆಚ್ಚದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾಗಿದ್ದರೂ ಇನ್ನೂ ಅನೇಕ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ತಾಲ್ಲೂಕಿನ 10ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪಟ್ಟಣದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿವೆ. ಇದರಿಂದ ಸಾರ್ವಜನಿಕರ ಸೇವೆಗೆ ಹಿನ್ನಡೆಯಾಗಿದ್ದು, ಅಹವಾಲುಗಳನ್ನು ಹೊತ್ತು ಬರುವ ಸಾರ್ವಜನಿಕರು ಕಚೇರಿಗಳನ್ನು ಹುಡುಕುವುದರಲ್ಲಿಯೇ ಹೈರಾಣಾಗುತ್ತಿದ್ದಾರೆ.
50-60 ಕಿಲೋಮೀಟರ್ ದೂರದ ತಾಲ್ಲೂಕಿನ ಗಡಿ ಭಾಗದಿಂದ ಬರುವ ಜನರು ಪಟ್ಟಣದಲ್ಲಿಯೇ ಕಿಲೋಮೀಟರ್‌ಗಟ್ಟಲೆ ದೂರದಲ್ಲಿರುವ ಕಚೇರಿಗಳನ್ನು ಹುಡುಕಿಕೊಂಡು ಹೋಗಲು ಆಟೊಗಳಿಗೆ ಬಾಡಿಗೆ ತೆರಬೇಕು.
ಕೆಲವೊಂದು ಇಲಾಖೆಯ ಕಚೇರಿಗಳು ಎಲ್ಲಿವೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಭವನ ನಿರ್ಮಾಣ ಮಾಡಿದ್ದರೂ ಕಂದಾಯ ಇಲಾಖೆ ಹಾಗೂ ಅದರಡಿಯಲ್ಲಿ ಬರುವ ನಾಲ್ಕೈದು ಇಲಾಖೆಗಳಿಗೆ ಮಾತ್ರ ಸೀಮಿತವಾಗಿದೆ.
ಬಹುತೇಕ ಕಟ್ಟಡಗಳು ಸರ್ಮರ್ಪಕ ವ್ಯವಸ್ಥೆ ಇಲ್ಲದ ಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲದೆ ನಿಂತುಕೊಂಡೇ ಕೆಲಸ ಮಾಡಿಸಿಕೊಳ್ಳಬೇಕು. ಅಮುಲ್ಯವಾದ ಕಡತಗಳನ್ನು ರಕ್ಷಿಸಿಕೊಳ್ಳುವುದು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ವಾರ್ಷಿಕವಾಗಿ ಲಕ್ಷಗಟ್ಟೆಲೆ ಬಾಡಿಗೆ ನೀಡುವ ಮನೆಗಳಲ್ಲಿರುವ ಕಿರಿದಾದ ಅಡುಗೆ ಮನೆ, ಮಲಗುವ ಕೋಣೆಯಲ್ಲಿಯೇ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿ ಬೇಸತ್ತಿದ್ದಾರೆ. ಕಚೇರಿಗಳಲ್ಲಿ ಸೂಕ್ತ ಜಾಗವಿಲ್ಲದೆ ಸಿಬ್ಬಂದಿಯನ್ನು ಒಂದೆಡೆ ಕೂರಿಸಿಕೊಂಡು ಸಭೆಗಳನ್ನು ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ತಾಲ್ಲೂಕು ಆಡಳಿತ ಭವನದಂತೆ ಪಟ್ಟಣದಲ್ಲಿ ಮತ್ತೊಂದು ಉತ್ತಮ ಕಟ್ಟಡ ನಿರ್ಮಾಣ ಮಾಡಿ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳನ್ನು ತಂದು ತಾಲ್ಲೂಕಿನ ಜನರಿಗೆ ಸರ್ಮರ್ಪಕ ಸೇವೆ ನೀಡಲು ಜನಪ್ರತಿನಿಧಿಗಳು ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ತಾಲ್ಲೂಕು ಆಡಳಿತ ಭವನದಂತೆ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ. ಮುಂದಿನ ದಿನಗಳನ್ನು ಅನುದಾನ ತಂದು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು
ಪಟ್ಟಣದಲ್ಲಿ ಮೂಲೆಗೊಂದು ಖಾಸಗಿ ಕಟ್ಟಡಗಳಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಒಂದೇ ಕಡೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕುಎಚ್. ವೀರಣ್ಣ ಸಿಪಿಐ ಜಿಲ್ಲಾ ಕಾರ್ಯದರ್ಶಿ
ಕೂಡ್ಲಿಗಿಯಲ್ಲಿನ ಕಾರ್ಮಿಕ ಇಲಾಖೆಯ ಕಚೇರಿ ಸಣ್ಣದೊಂದು ವಾಣಿಜ್ಯ ಮಳಿಗೆಯಲ್ಲಿದ್ದು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋದರೆ ಹೊರಗಡೆಯೇ ನಿಲ್ಲಬೇಕುಕೆ.ಬಿ. ಶ್ರೀನಿವಾಸ್ ಕಟ್ಟಡ ಕಾರ್ಮಿಕ ಸಿಡೆಗಲ್
ಕೂಡ್ಲಿಗಿ ಪಟ್ಟಣದಲ್ಲಿನ ಅನೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಹೋದಾಗ ಕುಳಿತುಕೊಳ್ಳಲು ಜಾಗವಿಲ್ಲದೆ ಅಧಿಕಾರಿಗಳು ಸಹ ಮುಜುಗರ ಅನುಭವಿಸಬೇಕಾಗುತ್ತದೆಶಿವಕುಮಾರ್ ಗುಡೇಕೋಟೆ
ಕಟ್ಟಡಕ್ಕೆ ಸ್ಥಳ ಗುರುತು
‘ನೂತನ ಕಟ್ಟಡ ನಿರ್ಮಾಣ ಮಾಡಲು ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಸಿಎ ನಿವೇಶನ ನಿಗದಿಯಾಗಿದ್ದು ಪಟ್ಟಣ ಪಂಚಾಯಿತಿಗೆ ಹಣ ಪಾವತಿ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಭಾಷಾ ಅರಸೀಕೆರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.