ADVERTISEMENT

ಎನ್‌ಇಪಿಯಿಂದ ಭಾರತ ಸೂಪರ್‌ ಪವರ್‌: ಕೃಷ್ಣದೇವರಾಯ ವಿವಿ ಕುಲಪತಿ ಸಿದ್ದು ಆಲಗೂರ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 8:54 IST
Last Updated 26 ಆಗಸ್ಟ್ 2021, 8:54 IST
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ್‌ ಅವರು ಸಸಿಗೆ ನೀರೆರೆದು ಕಾರ್ಯಾಗಾರ ಉದ್ಘಾಟಿಸಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ್‌ ಅವರು ಸಸಿಗೆ ನೀರೆರೆದು ಕಾರ್ಯಾಗಾರ ಉದ್ಘಾಟಿಸಿದರು.   

ಹೊಸಪೇಟೆ (ವಿಜಯನಗರ): ‘ಹೊಸ ಶಿಕ್ಷಣ ನೀತಿಯಿಂದ (ಎನ್‌ಇಪಿ) ಭಾರತ ಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ ಆಗಿ ಹೊರಹೊಮ್ಮಬಹುದು’ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ್‌ ಅಭಿಪ್ರಾಯಪಟ್ಟರು.

ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಗುರುವಾರ ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ–2020’ ಅನುಷ್ಠಾನ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಎಲ್ಲರಿಗೂ ಉತ್ತಮ ಶಿಕ್ಷಣ ಕೊಡುವುದು ಹೊಸ ಶಿಕ್ಷಣ ನೀತಿಯ ಮುಖ್ಯ ಉದ್ದೇಶ. ಕಡು ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ಬಹಳ ಕಡಿಮೆ ಬೆಲೆಯಲ್ಲಿ ಕೊಡಬೇಕೆಂಬ ಆಶಯ ಹೊಂದಿದೆ. ಅತ್ಯುನ್ನತವಾದ ಗುಣಮಟ್ಟ, ನೀತಿ ನಿರೂಪಣೆ ಹಾಗೂ ಸಮಗ್ರತೆಯನ್ನು ಇದು ಒಳಗೊಂಡಿದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯಗಳು ನಿರ್ದಿಷ್ಟವಾಗಿ ಇಂತಹುದೇ ಪಠ್ಯಪುಸ್ತಕ ರಚಿಸಬೇಕೆಂಬ ಷರತ್ತು ವಿಧಿಸಿಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಪಠ್ಯಕ್ರಮ ರಚಿಸುವ ಸ್ವಾತಂತ್ರ್ಯ ನೀಡಲಾಗಿದೆ. ಮೌಲ್ಯ, ಕೌಶಲ ಮತ್ತು ಜ್ಞಾನಕ್ಕೆ ಒತ್ತು ಕೊಡಲಾಗಿದೆ. 34 ವರ್ಷಗಳ ನಂತರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲಾಗುತ್ತಿದೆ. ಅದರ ಎಲ್ಲ ಆಗು ಹೋಗುಗಗಳಿಗೆ ಶಿಕ್ಷಣ ಕ್ಷೇತ್ರದವರು ಜವಾಬ್ದಾರಿ ಹೊರಬೇಕು’ ಎಂದರು.
‘ಡಾ. ಕಸ್ತೂರಿರಂಗನ್‌ ಸೇರಿದಂತೆ ನಾಲ್ಕು ಜನ ಕರ್ನಾಟಕದವರು ರಾಷ್ಟ್ರೀಯ ಶಿಕ್ಷಣ ನೀತಿಯ ಸದಸ್ಯರಾಗಿದ್ದಾರೆ. 22 ಭಾಷೆಗಳಲ್ಲಿ ನೀತಿಗಳನ್ನು ವಿವರಿಸಲಾಗಿದೆ. ಶಿಕ್ಷಣ ಕ್ಷೇತ್ರದ ಪ್ರತಿಯೊಬ್ಬರ ಅಭಿಪ್ರಾಯ ಪಡೆದು ಕರಡು ರೂಪಿಸಲಾಗಿದೆ. ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ಎನ್‌ಇಪಿ ಜಾರಿಗೆ ಬರಲಿದೆ. ನಮ್ಮ ಮೇಲೆ ಗುರುತರ ಜವಾಬ್ದಾರಿ ಇದೆ. ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದ ವಿದ್ಯಾರ್ಥಿಗಳ ಸವಾಲುಗಳಿಗೆ ತಕ್ಕಂತೆ ನೂತನ ಶಿಕ್ಷಣ ನೀತಿ ಜಾರಿಗೆ ತರಬೇಕಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಅಕ್ಟೋಬರ್‌ 1ರಿಂದ ನೂತನ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಅದಕ್ಕೆ ತಕ್ಕಂತೆ ಆಯಾ ವಿಶ್ವವಿದ್ಯಾಲಯಗಳು ಪಠ್ಯ ರಚಿಸಲಿವೆ. ಆದರೆ, ಅದನ್ನು ಅನುಷ್ಠಾನಗೊಳಿಸುವ ದೊಡ್ಡ ಹೊಣೆಗಾರಿಕೆ ಕಾಲೇಜುಗಳ ಮೇಲೆ ಇದೆ. ವಿದ್ಯಾರ್ಥಿ ಕೇಂದ್ರೀತ ಶಿಕ್ಷಣ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಗುರುತಿಸುವುದು, ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ವಿಜಯನಗರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ಬಿ. ನಾಗರಾಜಗೌಡ, ನೋಡಲ್‌ ಅಧಿಕಾರಿ ಪ್ರೊ. ಬಸವರಾಜ ಬೆಣ್ಣಿ, ಪ್ರಾಧ್ಯಾಪಕರಾದ ಟಿ. ರಘುಪ್ರಸಾದ್‌, ಮಂಜುನಾಥ ಎಚ್‌. ಆರೆಂಟನೂರು ಇದ್ದರು.

‘ಮೊದಲು ಕೆಲಸ ಆರಂಭಿಸಿದ್ದು ವಿಎಸ್‌ಕೆಯು’
‘ಹೊಸ ಶಿಕ್ಷಣ ನೀತಿ ಜಾರಿ ಬಗ್ಗೆ ಇಡೀ ರಾಜ್ಯದಲ್ಲಿ ಮೊಟ್ಟ ಮೊದಲು ಕೆಲಸ ಆರಂಭಿಸಿದ್ದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆಯು)’ ಎಂದು ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ್‌ ತಿಳಿಸಿದರು.

‘ಎನ್‌ಇಪಿ ಜಾರಿಗೆ ಏಪ್ರಿಲ್‌ನಲ್ಲೇ ಕೆಲಸ ಆರಂಭಿಸಲಾಗಿತ್ತು. ಆಯಾ ಕಾಲೇಜಿನ ಪ್ರಾಂಶುಪಾಲರನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಲಾಗಿತ್ತು. ಹಲವು ಸಭೆ, ವಿಚಾರ ವಿಮರ್ಶೆಯೊಂದಿಗೆ ಎನ್‌ಇಪಿ ಜಾರಿಗೆ ಸಿದ್ಧರಿದ್ದೇವೆ. ಸೂಕ್ತ ಅನುಷ್ಠಾನದ ಹೊಣೆ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಯ ಮೇಲೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.