ADVERTISEMENT

ಹೊಸಪೇಟೆ | ಅಲೆಮಾರಿ ಆಯೋಗ ನಿಶ್ಚಿತ: ಪಲ್ಲವಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:07 IST
Last Updated 21 ಆಗಸ್ಟ್ 2025, 5:07 IST
ಹೊಸಪೇಟೆಯಲ್ಲಿ ಬುಧವಾರ ಎಸ್‌ಸಿ, ಎಸ್‌ಟಿ ಅಲೆಮಾರಿ ಆಯೋಗದ ಅಧ್ಯಕ್ಷೆ ಜಿ.ಪಲ್ಲವಿ ಅವರಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ಎಸ್‌ಸಿ, ಎಸ್‌ಟಿ ಅಲೆಮಾರಿ ಆಯೋಗದ ಅಧ್ಯಕ್ಷೆ ಜಿ.ಪಲ್ಲವಿ ಅವರಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಅಲೆಮಾರಿ ಸಮುದಾಯಗಳಲ್ಲಿ 51 ಪರಿಶಿಷ್ಟ ಜಾತಿ ಮತ್ತು 21 ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇದ್ದಾರೆ. ಕೆಲವು ಹೆಸರುಗಳಲ್ಲಿನ ಸಣ್ಣ ತಪ್ಪಿನಿಂದಲೇ ಮೀಸಲಾತಿಯಿಂದ ವಂಚಿತರಾದವರು ಇದ್ದಾರೆ. ಇಂತಹ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಅಲೆಮಾರಿ ಆಯೋಗ ಶೀಘ್ರ ಅಸ್ತಿತ್ವಕ್ಕೆ ಬರಲಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.

ಮೂರು ದಿನ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಅವರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ನಿವೇಶನದ್ದು.  ಅವರಿಗೆ ಒಂದು ಶಾಶ್ವತ ನೆಲೆ ಕಂಡುಕೊಂಡರೆ ಅವರು ಬದುಕು ಕಟ್ಟಿಕೊಳ್ಳುತ್ತಾರೆ. ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಈ ಸಮಸ್ಯೆ ಇದೆ. ಎರಡು ತಿಂಗಳೊಳಗೆ ಅಲ್ಲಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ADVERTISEMENT

‘ಹೊಸಪೇಟೆಯ ಕಾರಿಗನೂರಿನಲ್ಲಿ ದಾನಿಯೊಬ್ಬರು ನಿವೇಶನ ನೀಡಿದ್ದರೂ ಹಕ್ಕಿಪಿಕ್ಕಿಗಳಿಗೆ ನಿವೇಶನ ಸಿಕ್ಕಿಲ್ಲ. ಆ ಸಮಸ್ಯೆಯನ್ನು ನಾನು ಇಂದು ಅಲ್ಲಿಗೆ ತೆರಳಿ ಕಂಡುಕೊಂಡಿದ್ದೇನೆ. ಎರಡು ತಿಂಗಳೊಳಗೆ ಅಲ್ಲಿನ ನಿವೇಶನವನ್ನು ಸೂಕ್ತ ರೀತಿಯಿಂದ ಹಕ್ಕಿಪಿಕ್ಕಿ ಸಮದಾಯದವರಿಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಕರೆದು ದಿನಾಂಕ ವಿಸ್ತರಿಸಲಾಗಿದೆ’ ಎಂದರು.

ಅಲೆಮಾರಿಗಳ ಎರಡು ಉದ್ಯಮಶೀಲತಾ ಯೋಕನೆಗಳು ಸ್ಥಗಿತಗೊಂಡಿದ್ದವು. ಇಂದಿನ ಸಭೆಯಲ್ಲಿ ಅದರ ಬಗ್ಗೆ ಲೀಡ್ ಬ್ಯಾಂಕ್‌ ಮ್ಯಾನೇಜರ್‌ಗೆ ತಿಳಿಸಿ ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸಲು ತಿಳಿಸಲಾಗಿದೆ. ಅಲೆಮಾರಿಗಳಿಗೆ ಯಾವುದೇ ಭದ್ರತೆಯ ಅಗತ್ಯ ಇಲ್ಲದೆ, ಸಿಬಿಲ್ ಸ್ಕೋರ್ ನೋಡದೆ ಸಾಲ ನೀಡಬೇಕಾಗುತ್ತದೆ, ವಸತಿ ಶಾಲೆಗಳಿಗೆ ಪರೀಕ್ಷೆ ಇಲ್ಲದೆಯೇ ಅವರೆಲ್ಲರಿಗೂ ಅವಕಾಶ ನೀಡುವುದು ಕಡ್ಡಾಯ. ಶಿಕ್ಷಣದಿಂದ ಮಾತ್ರ ಅಲೆಮಾರಿಗಳ ಬದುಕು ಹಸನಾಗಲು ಸಾಧ್ಯ ಎಂದು ಪಲ್ಲವಿ ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ನಿಗಮದ ಜಂಟಿ ಕಾರ್ಯದರ್ಶಿ ಆನಂದ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಆನಂದ ಕಾಳೆ, ಎಎಸ್‌ಪಿ ಜಿ.ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜೆ.ಎಂ.ಅನ್ನದಾನಸ್ವಾಮಿ ಇದ್ದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯನಗರ ಜಿಲ್ಲೆಯಲ್ಲಿ ಅಲೆಮಾರಿಗಳು ಹೆಚ್ಚಿದ್ದಾರೆ ಅವರಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಇಲ್ಲಿ ಉತ್ತಮ ಕೆಲಸ ಆಗಿದೆ.
ಜಿ.ಪಲ್ಲವಿ ಅಧ್ಯಕ್ಷೆ ಎಸ್‌ಸಿ ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮ
ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ವಿಳಂಬ ಕೂಡದು ಮೂರು ದಿನಗಳಲ್ಲಿ ಅವರು ವಾಸಿಸಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಮಾಣ ಪತ್ರ ವಿತರರಿಸಬೇಕು
ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
‘ವಂಚನೆಗೆ ಈಗ ಅವಕಾಶ ಇಲ್ಲ’
ನಿಗಮ ಸ್ಥಾಪನೆಯಾದುದು ಕಳೆದ ವರ್ಷ ಅದಕ್ಕಿಂತ ಮೊದಲು ಅಭಿವೃದ್ಧಿ ಕೋಶ ಇತ್ತು. ಆಗ ಮಧ್ಯವರ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಲೆಮಾರಿಗಳ ಯೋಜನೆಗಳನ್ನು ತಮ್ಮ ಹೆಸರಲ್ಲಿ ಮಾಡಿಕೊಂಡಿದ್ದು ಇದೆ. ಈಗ ಅದಕ್ಕೆ ಅವಕಾಶ ಇಲ್ಲ. ಹೊಸಪೇಟೆಯಲ್ಲಿ ಸುಡುಗಾಡು ಸಿದ್ಧರ ಹೆಸರಲ್ಲಿ ಹಲವು ಮುಖಂಡರು ವಂಚನೆ ಮಾಡಿರುವ ಬಗ್ಗೆ ನನಗೆ ಇದೀಗ ದೂರು ಬಂದಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಸಮಾಜ ಕಲ್ಯಾಣ ಅಧಿಕಾರಿಗಳಿಂದ ತನಿಖೆ ಮಾಡಿಸಿ ವರದಿ ತರಿಸಿಕೊಳ್ಳುತ್ತೇನೆ. ಎರಡು ತಿಂಗಳೊಳಗೆ ಈ ಸಮಸ್ಯೆ ಪರಿಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಜಿ.ಪಲ್ಲವಿ ಹೇಳಿದರು.
ಅಲೆಮಾರಿ ಮಕ್ಕಳ ಬಾಡಿಗೆ ಭಿಕ್ಷೆ
‘ಹೊಸಪೇಟೆಯಲ್ಲಿ ಹತ್ತಾರು ಭಿಕ್ಷಕರಿದ್ದು ಅವರು ಅಲೆಮಾರಿ ಕುಟುಂಬದ ಮಕ್ಕಳನ್ನು ಬಾಡಿಗೆ ಪಡೆದುಕೊಂಡು ಭಿಕ್ಷೆ ಬೇಡುತ್ತಿರುವ ವಿಚಾರ ನನಗೆ ಹೊಸದು. ಇಂತಹ ಪ್ರಕರಣ ಇದ್ದರೆ ನನ್ನ ಗಮನಕ್ಕೆ ತನ್ನಿ ಕ್ರಮ ಜರುಗಿಸುವುದು ನಿಶ್ಚಿತ’ ಎಂದು ಪಲ್ಲವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.