ADVERTISEMENT

ಹರಪನಹಳ್ಳಿ: ಬಸ್ ನಿಲ್ದಾಣ ಅಪೂರ್ಣ ಕಾಮಗಾರಿಗೆ ಬೇಸತ್ತ ಜನತೆ

ಅರಸೀಕೆರೆ ಹೋಬಳಿ ಕೇಂದ್ರದಲ್ಲಿ ಸಾಲು ಸಾಲು ಸಮಸ್ಯೆ

ವಿಶ್ವನಾಥ ಡಿ.
Published 10 ಫೆಬ್ರುವರಿ 2025, 4:05 IST
Last Updated 10 ಫೆಬ್ರುವರಿ 2025, 4:05 IST
ಹರಪನಹಳ್ಳಿ ತಾಲ್ಲೂಕು ಅರಸೀಕೆರೆಯಲ್ಲಿ ಉದ್ಘಾಟನೆ ಆಗದಿರುವ ಗ್ರಂಥಾಲಯ ಕಟ್ಟಡ
ಹರಪನಹಳ್ಳಿ ತಾಲ್ಲೂಕು ಅರಸೀಕೆರೆಯಲ್ಲಿ ಉದ್ಘಾಟನೆ ಆಗದಿರುವ ಗ್ರಂಥಾಲಯ ಕಟ್ಟಡ   

ಹರಪನಹಳ್ಳಿ: ಅಪೂರ್ಣಗೊಂಡ ಬಸ್ ನಿಲ್ದಾಣ ಕಾಮಗಾರಿ, ಪೂರ್ಣಗೊಂಡರೂ ಆರಂಭಗೊಳ್ಳದ ಗ್ರಂಥಾಲಯ ಕಟ್ಟಡ, ವಿದ್ಯುತ್ ಪರಿವರ್ತಕ ಘಟಕ ಚಾಲನೆಗೊಳ್ಳದ ಪರಿಣಾಮ ವಿದ್ಯುತ್ ಕಣ್ಣಾಮುಚ್ಚಾಲೆಗೆ ಬೇಸತ್ತ ಜನತೆ.

ತಾಲ್ಲೂಕಿನ ಅರಸೀಕೆರೆ ಹೋಬಳಿ ಕೇಂದ್ರದಲ್ಲಿ ಅಭಿವೃದ್ದಿ ಕಾಮಗಾರಿಗಳು ಕುಂಠಿತಗೊಂಡಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸಕೋಟೆ, ಮಾದಿಹಳ್ಳಿ, ಅಣಜಿಗೆರೆ, ಉಚ್ಚಂಗಿದುರ್ಗ, ಪುಣಬಗಟ್ಟ, ಲಕ್ಷ್ಮೀಪುರ, ಹಿರೆಮೇಗಳಗೆರೆ, ಚಟ್ನಿಹಳ್ಳಿ, ಶಿಂಗ್ರಿಹಳ್ಳಿ, ಕಂಚಿಕೇರಿ 10 ಗ್ರಾಮ ಪಂಚಾಯಿತಿ ಒಳಗೊಂಡು ತಾಲ್ಲೂಕಿನ ಅರಸೀಕೆರೆಯು ದೊಡ್ಡ ಹೋಬಳಿ ಕೇಂದ್ರ. ಈ ಪೈಕಿ ದಾವಣಗೆರೆ ಜಿಲ್ಲೆ ಜಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ 7 ಗ್ರಾಮ ಪಂಚಾಯಿತಿ, ಉಳಿದವು ಹರಪನಹಳ್ಳಿ ವಿದಾನಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. 72,111 ಮತದಾರರಿದ್ದಾರೆ.

19 ಕಂದಾಯ ಗ್ರಾಮ ಹೊಂದಿರುವ ಹೋಬಳಿ ಕೇಂದ್ರಕ್ಕೆ ನಾಡಕಚೇರಿ, ಕೃಷಿ ಇಲಾಖೆ ಕೆಲಸಗಳಿಗಾಗಿ ನಿತ್ಯ ಬಂದು ಹೋಗುವ ಸಾವಿರಾರು ಜನತೆಯು ಸಾರಿಗೆ ಬಸ್ ನಿಲ್ದಾಣದಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಜಾಗವಿಲ್ಲ. ₹.1.25 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ಕಳೆದರೂ ಪೂರ್ಣಗೊಳ್ಳದೇ ಪ್ರಯಾಣಿಕರು ಪರದಾಡುವಂತಾಗಿದೆ. ಬೆಳಿಗ್ಗೆ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಿಸಿಲಲ್ಲೇ ನಿಂತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ನಾಡಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿಗಳು ಕಿಷ್ಕಿಂಧೆಯಾಗಿದ್ದು ಸಿಬ್ಬಂದಿ ಕರ್ತವ್ಯಕ್ಕೆ ಸಮಸ್ಯೆಗಳಾಗುತ್ತಿವೆ. ಶಿಥಿಲಗೊಂಡಿರುವ ಕಟ್ಟಡ ಮಳೆಗಾಲದಲ್ಲಿ ಸೋರುತ್ತದೆ.

ADVERTISEMENT

ಉಚ್ಚಂಗಿದುರ್ಗ ಸಮುದಾಯ ಭವನ, ಯಾತ್ರಿ ನಿವಾಸ ಕಾಮಗಾರಿ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಲಾಗಿದೆ, ಆದರೆ ಉದ್ಘಾಟನೆ ಆಗದೇ ಓದುಗರಿಗೆ ತೊಂದರೆ ಆಗಿದೆ. ಹಸ್ತಾಂತರ ಮಾಡಿಲ್ಲ ಎಂದು ಗ್ರಾಮ ಪಂಚಾಯಿತಿ ಮೂಲಗಳು ಖಚಿತಪಡಿಸಿವೆ. 2019-20ನೇ ಸಾಲಿನಲ್ಲಿ ₹12 ಕೋಟಿ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ಘಟಕಕ್ಕೆ ಚಾಲನೆ ನೀಡದೆ ನೆನೆಗುದಿಗೆ ಬಿದ್ದಿರುವ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಕೃಷಿ, ಸರ್ಕಾರಿ ಕಚೇರಿ ಕೆಲಸಗಳಿಗೆ ಅಡಚಣೆಯಾಗಿದೆ. ಜಗಳೂರು ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಿರುವ ಅರಸೀಕೆರೆ ಹೋಬಳಿ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಿ, ಪರದಾಟ ತಪ್ಪಿಸಬೇಕೆಂಬುದು ಈ ಭಾಗದ ಜನತೆಯ ಹಕ್ಕೊತ್ತಾಯವಾಗಿದೆ.

ಹರಪನಹಳ್ಳಿ ತಾಲ್ಲೂಕು ಅರಸೀಕೆರೆಯಲ್ಲಿ ಬಸ್ ನಿಲ್ದಾಣದಲ್ಲಿ ಅಪೂರ್ಣ ಕಾಮಗಾರಿ
ಗ್ರಂಥಾಲಯ ವಿದ್ಯುತ್ ಪರಿವರ್ತಕ ಘಟಕ ಉದ್ಘಾಟಿಸಬೇಕು. ವಸತಿ ನಿಲಯ ನಾಡಕಚೇರಿ ಕಟ್ಟಡ ಮಂಜೂರಾತಿಗಾಗಿ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗೆ ನಿರ್ಲಕ್ಷಿಸಿದರೆ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ
ಗುಡಿಹಳ್ಳಿ ಹಾಲೇಶ್ ಕಾರ್ಯದರ್ಶಿ ಸಿಪಿಐ ತಾಲ್ಲೂಕು ಮಂಡಳಿ. ಹರಪನಹಳ್ಳಿ
ನಾಡಕಚೇರಿ ಗ್ರಾಮ ಆಡಳಿತ ಕಚೇರಿಗಳು ಹಳೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ನೂತನ ಕಟ್ಟಡ ನಿರ್ಮಿಸಲು ಒಂದು ಎಕರೆ ಜಾಗ ಗುರುತಿಸಲಾಗಿದೆ. ಸರ್ಕಾರದ ಅನುದಾನ ಬಿಡುಗಡೆಗೆ ಕಾಯುತ್ತಿದ್ದೇವೆ
ಬಿ.ವಿ.ಗಿರೀಶ್ ಬಾಬು ತಹಶೀಲ್ದಾರರು ಹರಪನಹಳ್ಳಿ
ಜಗಳೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ಅರಸೀಕೆರೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಸರ್ಕಾರದಿಂದ ಏಳು ಗ್ರಾಮ ಪಂಚಾಯಿಗಳ ವ್ಯಾಪ್ತಿಗೆ ಆಶ್ರಯ ಯೋಜನೆಯಡಿ ಮನೆಗಳು ಮಂಜೂರಾಗಿಲ್ಲ
ರಂಗಪ್ಪ ಕಾರ್ಮಿಕ ಅರಸೀಕೆರೆ
ಹೆಚ್ಚುವರಿ ಹಾಸ್ಟೆಲ್ ಗೆ ಬೇಡಿಕೆ
ಅರಸೀಕೆರೆಯಲ್ಲಿ 2 ಪ್ರಥಮ ದರ್ಜೆ 2 ಪಿಯು ಕಾಲೇಜು 5 ಪ್ರಾಥಮಿಕ ಶಾಲೆಗಳು ಹೈಸ್ಕೂಲ್ ಐಟಿಐ ಕಾಲೇಜುಗಳಿವೆ. ಸಾವಿರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಸಮಾಜಕಲ್ಯಾಣ ಇಲಾಖೆಯಡಿ ಇರುವ ಒಂದು ಹಾಸ್ಟೆಲ್‌ನಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಹೆಚ್ಚುವರಿಯಾಗಿ ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ಹಾಸ್ಟೆಲ್ ಆರಂಭಿಸಲು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಈಡೇರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.