ADVERTISEMENT

ಮಹಜರು ನಡೆಸಿ ಬರುವಾಗ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:15 IST
Last Updated 10 ಏಪ್ರಿಲ್ 2025, 15:15 IST
ಹೊಸಪೇಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಆರೋಪಿಯ ಆರೋಗ್ಯ ವಿಚಾರಿಸಿದ ಎಸ್‌ಪಿ ಶ್ರೀಹರಿಬಾಬು ಮತ್ತು ಎಎಸ್‌ಪಿ ಸಲೀಂ ಪಾಷಾ
ಹೊಸಪೇಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಆರೋಪಿಯ ಆರೋಗ್ಯ ವಿಚಾರಿಸಿದ ಎಸ್‌ಪಿ ಶ್ರೀಹರಿಬಾಬು ಮತ್ತು ಎಎಸ್‌ಪಿ ಸಲೀಂ ಪಾಷಾ   

ಹೊಸಪೇಟೆ (ವಿಜಯನಗರ): ನಗರದ ಜಂಬುನಾಥ ರಸ್ತೆಯಲ್ಲಿ ಬುಧವಾರ ರಾತ್ರಿ ಯುವಕನ ಬರ್ಬರ ಕೊಲೆ ಮಾಡಿದ ಆರೋಪಿ ಹುಚ್ಚಕಾಳಿ ಎಂಬಾತ ತಾನಿಟ್ಟ ಮಾರಕಾಸ್ತ್ರ ಸ್ಥಳ ತೋರಿಸಿ ಬರುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆತನನ್ನು ನಿಯಂತ್ರಿಸಲು ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದ ಘಟನೆ ಗುರುವಾರ ನಸುಕಿನಲ್ಲಿ ನಗರದ ಹೊರವಲಯದ ಮಹಾದೇವ ಇಂಡಸ್ಟ್ರೀಸ್ ಬಳಿ ನಡೆದಿದೆ.

ಆರೋಪಿ ಕೊಲೆ ಮಾಡಲು ಬಳಸಿದ ಮಾರಕಾಸ್ತ್ರಗಳನ್ನು ರೈಲು ನಿಲ್ದಾಣ ಮತ್ತು ಕಾಲುವೆ ನಡುವಿನ ಸ್ಥಳದಲ್ಲಿ ಬಚ್ಚಿಟ್ಟಿದ್ದ. ಆರೋಪಿಯನ್ನು ಬಂಧಿಸಿದ್ದ ಪಟ್ಟಣ ಠಾಣೆ ಪೊಲೀಸರು ನಸುಕಿನಲ್ಲೇ ಕತ್ತರಿ ಇರಿಸಿದ ಸ್ಥಳ ಪರಿಶೀಲನೆಗೆ ತೆರಳಿ ಮಹಜರು ನಡೆಸಿದ್ದರು. ವಾಪಸ್ ಬರುವಾಗ ಆರೋಪಿ ಮೂತ್ರ ವಿಸರ್ಜಿಸುವ ನೆಪವೊಡ್ಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ, ಆತನನ್ನು ನಿಯಂತ್ರಿಸಲು ಗುಂಡು ಹಾರಿಸಬೇಕಾಯಿತು ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಗುರುವಾರ ಮಾಧ್ಯಮದವರಿಗೆ ತಿಳಿಸಿದರು.

ಘಟನೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ತನಿಖಾಧಿಕಾರಿ ಹುಲುಗಪ್ಪ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಅರೋಪಿ ನಡೆಸಿದ ದಾಳಿಯಿಂದ ಪಟ್ಟಣ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌  ಲಿಂಗರಾಜ್ ಮತ್ತು ಕಾನ್‌ಸ್ಟೆಬಲ್‌ ಕೊಟ್ರೇಶ್ ಗಾಯಗೊಂಡಿದ್ದಾರೆ. ಆರೋಪಿ ಮತ್ತು ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ADVERTISEMENT

2015ರ ದ್ವೇಷ: ‘ಹೊನ್ನೂರಸ್ವಾಮಿ ಮತ್ತು ಕಾಳಿ ನಡುವೆ 2015ರಿಂದಲೂ ದ್ವೇಷ ಇತ್ತು. 2015ರಲ್ಲಿ ಭೀಮ ಎಂಬಾತನ ಕೊಲೆ ಪ್ರಕರಣದಲ್ಲಿ ಹೊನ್ನೂರಸ್ವಾಮಿ ಕಾಳಿ ವಿರುದ್ಧ ಸಾಕ್ಷ್ಯ ನುಡಿದಿದ್ದ. ಇದರಿಂದ ಕಾಳಿ ದ್ವೇಷ ಸಾಧಿಸಿದ್ದ. 2021ರಲ್ಲಿ ಹೊನ್ನೂರಸ್ವಾಮಿಯನ್ನು ಕೊಲ್ಲಲು ಯತ್ನಿಸಿ ವಿಫಲನಾಗಿದ್ದ. ಬಳಿಕ ಹೊನ್ನೂರಸ್ವಾಮಿ ದಾವಣಗೆರೆಗೆ ಕೆಲಸಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದ. ಜಂಬುನಾಥ ಸ್ವಾಮಿ ಜಾತ್ರೆ ಪ್ರಯುಕ್ತ ಆತ ಊರಿಗೆ ಬಂದಿದ್ದ ಸಂದರ್ಭ ನೋಡಿಕೊಂಡು ಆತನ ಮೇಲೆ ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ’ ಎಂದು ಎಸ್‌ಪಿ ಮಾಹಿತಿ ನೀಡಿದರು.

ಕೊಲೆ ಹೆಚ್ಚಿಲ್ಲ: ಕಳೆದ ಎರಡು ತಿಂಗಳಲ್ಲಿ ನಗರದಲ್ಲಿ ಎರಡು ಕೊಲೆಗಳು ನಡೆದಿದ್ದರೂ, ಒಟ್ಟಾರೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿಲ್ಲ. 2023ರಲ್ಲಿ 17, 2024ರಲ್ಲಿ 14 ಕೊಲೆಗಳು ಜಿಲ್ಲೆಯಲ್ಲಿ ನಡೆದಿದ್ದವು. ಕಳೆದ ಎರಡು ವರ್ಷಗಳಲ್ಲಿ ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಬೇಕಾದ ಸ್ಥಿತಿ ಬಂದುದು ಈಗ ಮಾತ್ರ ಎಂದು ಅವರು ಹೇಳಿದರು.

ಬೆಟ್ಟಿಂಗ್: 6 ಪ್ರಕರಣ

‘ಐಪಿಎಲ್‌ ಶುರುವಾದ ಬಳಿಕ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ವ್ಯಾಪಕವಾಗಿದೆ ಎಂಬ ಆರೋಪ ಸುಳ್ಳು. ಇದುವರೆಗೆ ಆರು ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಕಡೆ ಜಾತ್ರೆಗಳು ಕೊನೆಗೊಂಡ ಕಾರಣ ಇನ್ನು ಮುಂದೆ ಇನ್ನಷ್ಟು ನಿಗಾ ವಹಿಸಲಾಗುವುದು. ಹೊಸಪೇಟೆಯಲ್ಲಿ ಬೆಟ್ಟಿಂಗ್‌ನ ಕಿಂಗ್‌ಪಿನ್ ಇದ್ದಾರೆ ಎಂದು ಹೇಳುವುದೂ ಸರಿಯಲ್ಲ. ನಿರ್ದಿಷ್ಟವಾಗಿ ದೂರು ನೀಡಿದರೆ ಆರೋಪಿಗಳನ್ನು ಖಂಡಿತ ವಶಕ್ಕೆ ಪಡೆಯಲಾಗುವುದು’ ಎಂದು ಎಸ್‌ಪಿ ಶ್ರೀಹರಿಬಾಬು ಹೇಳಿದರು. ಮುಮ್ತಾಜ್‌ ಬೇಗಂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಸಂಬಂಧಿಸಿದ ₹3 ಕೋಟಿ ಮೌಲ್ಯದ ಆಸ್ತಿಗಳನ್ನು ಕೋರ್ಟ್‌ ಸುಪರ್ದಿಗೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.