ADVERTISEMENT

ರಾಜ್ಯ ಪೊಲೀಸ್‌ ಸುವರ್ಣ ಮಹೋತ್ಸವ: ಹಂಪಿಯಲ್ಲಿ ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:44 IST
Last Updated 10 ಮಾರ್ಚ್ 2024, 14:44 IST
ಹಂಪಿಯಲ್ಲಿ ಭಾನುವಾರ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌.ಚಾಲನೆ ನೀಡಿದರು
ಹಂಪಿಯಲ್ಲಿ ಭಾನುವಾರ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌.ಚಾಲನೆ ನೀಡಿದರು   

ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಪ್ರಯುಕ್ತ ಮ್ಯಾರಥಾನ್ ಹಾಗೂ ಡ್ರಗ್ಸ್ ಮತ್ತು ಮಾದಕ ವಸ್ತುಗಳ ಜಾಗೃತಿ ಕುರಿತು ಓಟವನ್ನು ಹಂಪಿಯಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಲಾಯಿತು.

ವಿಜಯ ವಿಠ್ಠಲ ದೇವಸ್ಥಾನದ ಆವರಣದಿಂದ ಆರಂಭವಾದ ಈ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ಹಸಿರು ನಿಶಾನೆ ತೋರಿಸಿದರು. ವಿರೂಪಾಕ್ಷ ದೇವಸ್ಥಾನದ ಮುಂಭಾಗದ ಎದುರು ಬಸವಣ್ಣ ಮಂಟಪದ ಬಳಿ ಮ್ಯಾರಥಾನ್‌ ಕೊನೆಗೊಂಡಿತು. ಒಟ್ಟು 10 ಕಿ.ಮೀ.ದೂರವನ್ನು ಸ್ಪರ್ಧಿಗಳು ಕ್ರಮಿಸಿದರು. ನೂರಾರು ಮಂದಿ ಪಾಲ್ಗೊಂಡಿದ್ದರು.

ನಗರದ ಶಂಕರ ಆನಂದಸಿಂಗ್ ಕಾಲೇಜಿನ ವಿದ್ಯಾರ್ಥಿ ಮಧುಮೋಹನ್– ಪ್ರಥಮ, ವಿನಯ– ದ್ವಿತೀಯ, ಶೇಕ್ಷಾವಲಿ– ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ.ನಂದಗಡಿ ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಿದರು.

ADVERTISEMENT

ಮುನಿರಾಬಾದ್‌ನ ಐಆರ್‌ಬಿ ಮತ್ತು ಕೆಎಸ್‌ಆರ್‌ಪಿ–ಪಿಟಿಎಸ್‌ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಮುದ್ದೆ ಪಾಲ್‌, ಎಸ್‌ಪಿ ಶ್ರೀಹರಿಬಾಬು ಬಿ.ಎಲ್., ಎಎಸ್‌ಪಿ ಸಲೀಂ ಪಾಷಾ,  ಜಿಲ್ಲಾ ಗೃಹರಕ್ಷಕ ಸಮಾದೇಷ್ಟ ಬಸವರಾಜ ಅಗಸರ್, ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಹೊಸಪೇಟೆ ಟೌನ್‌ ಇನ್‌ಸ್ಪೆಕ್ಟರ್‌ ಲಖನ್ ಮುಸಗುಪ್ಪಿ, ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಗುರುರಾಜ ಕಟ್ಟಿಮನಿ, ಚಿತ್ತವಾಡ್ಗಿಯ ಇನ್‌ಸ್ಪೆಕ್ಟರ್ ಅಶ್ವತ್ಥನಾರಾಯಣ ಯಾತನೂರು, ಶ್ರೀಕಾಂತ, ಮಲ್ಲನಗೌಡ ನಾಯ್ಕರ್, ಹಂಪಿ ಪಿಎಸ್‍ಐ ಶಿವಕುಮಾರ ನಾಯ್ಕ್, ಹನುಮಂತಪ್ಪ ತಳವಾರ ಇದ್ದರು.

ಮ್ಯಾರಥಾನ್‌ನಲ್ಲಿ ವಿಜೇತರಾದ ವಿನಯ (ದ್ವಿತೀಯ) ಮಧುಮೋಹನ (ಪ್ರಥಮ) ಮತ್ತು ಶೇಕ್ಷಾವಲಿ (ತೃತೀಯ)   –ಪ್ರಜಾವಾಣಿ ಚಿತ್ರ/ ಲವ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.