ADVERTISEMENT

ಕ್ರೀಡಾಂಗಣ, ವೃತ್ತಕ್ಕೆ ಪುನೀತ್‌ ರಾಜಕುಮಾರ್‌ ಹೆಸರು

ಹೊಸಪೇಟೆ ನಗರಸಭೆಯ ಮೊದಲ ಸಾಮಾನ್ಯ ಸಭೆಯಲ್ಲೇ ಸರ್ವಾನುಮತದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 15:09 IST
Last Updated 9 ಫೆಬ್ರುವರಿ 2022, 15:09 IST
ಹೊಸಪೇಟೆಯಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಲಶುದ್ಧೀಕರಣದ ವಾರ್ಷಿಕ ನಿರ್ವಹಣೆಗೆ ಸಂಬಂಧಿಸಿ ಬೆಂಗಳೂರಿನ ರಂಗಾ ಕೆಮಿಕಲ್ಸ್‌ ಅನ್ನು ಮುಂದುವರೆಸಬೇಕೆಂದು ಹೆಚ್ಚಿನ ಸದಸ್ಯರು ಒತ್ತಾಯಿಸಿ ಬೆಂಬಲ ಸೂಚಿಸಿದರು
ಹೊಸಪೇಟೆಯಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಲಶುದ್ಧೀಕರಣದ ವಾರ್ಷಿಕ ನಿರ್ವಹಣೆಗೆ ಸಂಬಂಧಿಸಿ ಬೆಂಗಳೂರಿನ ರಂಗಾ ಕೆಮಿಕಲ್ಸ್‌ ಅನ್ನು ಮುಂದುವರೆಸಬೇಕೆಂದು ಹೆಚ್ಚಿನ ಸದಸ್ಯರು ಒತ್ತಾಯಿಸಿ ಬೆಂಬಲ ಸೂಚಿಸಿದರು   

ಹೊಸಪೇಟೆ (ವಿಜಯನಗರ): ನಗರದ ತಹಶೀಲ್ದಾರ್‌ ಕಚೇರಿ ಬಳಿಯಿರುವ ನಾಲ್ಕು ಕೂಡು ರಸ್ತೆಯ ವೃತ್ತ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ದಿವಂಗತ ನಟ ಪುನೀತ್‌ ರಾಜಕುಮಾರ್‌ ಅವರ ಹೆಸರು ನಾಮಕರಣ ಮಾಡುವುದಕ್ಕೆ ಬುಧವಾರ ನಡೆದ ನಗರಸಭೆಯ ಸಾಮಾನ್ಯ ಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ.

ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ನಂತರ ನಡೆದ ನಗರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಮಾಡಲಾಯಿತು. ಬಳಿಕ ವೃತ್ತ ಹಾಗೂ ಕ್ರೀಡಾಂಗಣಕ್ಕೆ ಪುನೀತ್‌ ರಾಜಕುಮಾರ್‌ ಹೆಸರಿಡುವಂತೆ ಅಖಿಲ ಕರ್ನಾಟಕ ಡಾ. ರಾಜವಂಶ ಕನ್ನಡ ಯುವಸೇನೆ ಸಲ್ಲಿಸಿದ್ದ ಮನವಿ ವಿಷಯವನ್ನು ಕೈಗೆತ್ತಿಕೊಳ್ಳಲಾಯಿತು. ಎಲ್ಲ ಸದಸ್ಯರು ಎರಡಕ್ಕೂ ಸಮ್ಮತಿ ಸೂಚಿಸಿದರು.

ಸಾರ್ವಜನಿಕರ ಆಕ್ಷೇಪಣೆ/ಅಭಿಪ್ರಾಯ ಪಡೆದ ನಂತರ ಎರಡಕ್ಕೂ ಪುನೀತ್‌ ಹೆಸರು ಅಧಿಕೃತವಾಗಿ ನಾಮಕರಣವಾಗಲಿದೆ. ಎರಡಕ್ಕೂ ಪುನೀತ್‌ ಹೆಸರಿಡಬೇಕೆಂದು ಹಲವು ಸಂಘಟನೆಗಳು, ಅಭಿಮಾನಿಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದವು. ಅನುಮತಿಗೂ ಮೊದಲೇ ವೃತ್ತದಲ್ಲಿ ಪುನೀತ್‌ ಅವರ ಭಾವಚಿತ್ರವಿರುವ ನಾಮಫಲಕ ಹಾಕಲಾಗಿತ್ತು. ನಗರಸಭೆ ಈಗ ಅದಕ್ಕೆ ಸ್ಪಂದಿಸಿದೆ.

ADVERTISEMENT

24X7 ಕಾಮಗಾರಿಗೆ ಗರಂ:

ನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ, 24X7 ಕುಡಿಯುವ ನೀರಿನ ಕಳಪೆ ಕಾಮಗಾರಿ ಕುರಿತು ಹಲವು ಸದಸ್ಯರು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ಸದಸ್ಯ ಗೌಸ್‌ ಮಾತನಾಡಿ, ಐದಾರೂ ವರ್ಷಗಳಿಂದ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಅದರಿಂದ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ ಹಾಳಾಗಿವೆ. ಕಲುಷಿತ ನೀರು ಪೂರೈಕೆಯಾಗುತ್ತಿದೆ. ಗುತ್ತಿಗೆದಾರರು ಬದಲಾದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.

ಇನ್ನೊಬ್ಬ ಕಾಂಗ್ರೆಸ್‌ ಸದಸ್ಯೆ ಮುಮ್ತಾಜ್‌ ಕಲಂದರ್‌, ರಸ್ತೆ ನಿರ್ಮಿಸುವುದಕ್ಕೂ ಮುಂಚೆ ಯುಜಿಸಿ ಕಾಮಗಾರಿ ಮುಗಿಸಬೇಕು. ಅದೇ ಪಕ್ಷದ ಸದಸ್ಯರಾದ ಖಾರದಪುಡಿ ಮಹೇಶ, ಗುಜ್ಜಲ್‌ ರಘು, ಯುಜಿಡಿ, ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ. ಗುಣಮಟ್ಟದ ಕೆಲಸ ಮಾಡಿಸಬೇಕು ಎಂದು ಆಗ್ರಹಿಸಿದರು.

ಪಕ್ಷೇತರ ಸದಸ್ಯ ಎಚ್‌.ಎಲ್‌. ಸಂತೋಷ್‌ ಮಾತನಾಡಿ, ಎಸ್‌.ಆರ್‌. ನಗರದಲ್ಲಿ ಯುಜಿಡಿ ಕಾಮಗಾರಿಯಿಂದ ದೊಡ್ಡ ಸಮಸ್ಯೆಯಾಗಿದೆ. ಅನೇಕ ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಮಾಜಿ ಶಾಸಕ ಗೂಡು ಸಾಬ್‌ ಮನೆ ಎದುರು ಒಳಚರಂಡಿ ನೀರು ಹರಿಯುತ್ತಿದೆ ಎಂದರು. ಸದಸ್ಯರಾದ ಮುನ್ನಿ ಕಾಸಿಂ, ರಮೇಶ ಗುಪ್ತಾ, ಜೀವರತ್ನಂ ಕೂಡ ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ಮಾಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯ ಗುಜ್ಜಲ್‌ ಹನುಮಂತಪ್ಪ, ನಿಶಾನಿ ಕ್ಯಾಂಪ್‌ ಸಮೀಪವೇ ತುಂಗಭದ್ರಾ ಜಲಾಶಯವಿದ್ದರೂ ಕುಡಿಯುವ ನೀರು ಪೂರೈಸುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು. ವಾರದಲ್ಲಿ ಸರಿಪಡಿಸಲಾಗುವುದು ಎಂದು ಪೌರಾಯುಕ್ತ ಮನ್ಸೂರ್‌ ಅಲಿ ಭರವಸೆ ನೀಡಿದರು.

ಬಿಜೆಪಿ ಸದಸ್ಯ ರೂಪೇಶ್‌ ಕುಮಾರ್‌, ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಬೇಕು. ಅನೇಕ ಕಡೆ ಗುಂಡಿಗಳು ಬಿದ್ದಿವೆ. ನಗರ ಹಾಳಾಗುತ್ತಿದೆ ಎಂದರು. ಅದಕ್ಕೆ ಸಭೆ ಸಮ್ಮತಿ ಸೂಚಿಸಿತು.

ಮೊದಲ ದಿನವೇ ಸಭೆ ವಿಳಂಬ:

ಹೊಸದಾಗಿ ಅಸ್ತಿತ್ವಕ್ಕೆ ಬಂದ ನಂತರ ನಡೆದ ನಗರಸಭೆ ಸಾಮಾನ್ಯ ಸಭೆ ಮೊದಲ ದಿನವೇ 45 ನಿಮಿಷಯ ವಿಳಂಬವಾಗಿ ಆರಂಭಗೊಂಡಿತು.

ಸದಸ್ಯ ಗುಜ್ಜಲ್‌ ರಘು, ಮೊದಲ ದಿನವೇ ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದರು. ಅದಕ್ಕೆ ಪೌರಾಯುಕ್ತ ಮನ್ಸೂರ್‌ ಅಲಿ, ಮೊದಲ ದಿನವಾಗಿರುವುದರಿಂದ ತಡವಾಗಿದೆ. ಮುಂದಿನ ಸಭೆ ಸಕಾಲಕ್ಕೆ ಆರಂಭವಾಗುತ್ತದೆ ಎಂದರು. ಸಭೆ ಆರಂಭಗೊಂಡ ನಂತರ ಸದಸ್ಯರು ಕೇಳಿದ ನಂತರ ಸಭೆಯ ಅಜೆಂಡಾ ಅವರಿಗೆ ವಿತರಿಸಲಾಯಿತು. ಹಲವು ಸದಸ್ಯೆಯರ ಪತಿಯರು ಸಭಾಂಗಣದ ಕೊನೆಯಲ್ಲಿ ಕುಳಿತು ವೀಕ್ಷಿಸಿದರು.

ಅಧ್ಯಕ್ಷರ ಅಧಿಕಾರ ಚಲಾಯಿಸಿದ ಉಪಾಧ್ಯಕ್ಷ:

ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಸಭೆಯಲ್ಲಿದ್ದರೂ ಅವರ ಅಧಿಕಾರವನ್ನು ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌ ಚಲಾಯಿಸಿದರು.

ಸ್ವತಃ ಅಧ್ಯಕ್ಷರೇ, ‘ಸಭೆಯನ್ನು ಉಪಾಧ್ಯಕ್ಷರು ನಡೆಸಿಕೊಂಡು ಹೋಗುತ್ತಾರೆ’ ಎಂದು ತಿಳಿಸಿದ್ದರಿಂದ ಆನಂದ್‌ ಸಭೆ ನಡೆಸಿದರು. ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಕೂಡ ಅವರೇ ನಡೆಸಿಕೊಟ್ಟರು. ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿರುವ ಆನಂದ್‌, ಕಾನೂನು ಪರಿಣತಿಯೂ ಹೊಂದಿದ್ದಾರೆ. ಅಧ್ಯಕ್ಷರು ಸುಮ್ಮನಿದ್ದು ಕಾರ್ಯ ಕಲಾಪ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.