ADVERTISEMENT

ವಿಜಯನಗರ| ₹23 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ: ನಗರಸಭೆ ಹಂಗಿಲ್ಲದೆ ಡಾಂಬರೀಕರಣ

ಎಂ.ಜಿ.ಬಾಲಕೃಷ್ಣ
Published 16 ನವೆಂಬರ್ 2025, 3:00 IST
Last Updated 16 ನವೆಂಬರ್ 2025, 3:00 IST
ಹೊಸಪೇಟೆ ನಗರದಲ್ಲಿ ರಸ್ತೆಗಳಿಗೆ ಮರುಡಾಂಬರೀಕರಣ ನಡೆಯುತ್ತಿರುವುದು  –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ ನಗರದಲ್ಲಿ ರಸ್ತೆಗಳಿಗೆ ಮರುಡಾಂಬರೀಕರಣ ನಡೆಯುತ್ತಿರುವುದು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ನಗರದಲ್ಲಿ ಮೂರು ವರ್ಷಗಳ ಬಳಿಕ ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ ನಡೆದಿದೆ. ಆದರೆ, ಇದು ನಗರಸಭೆಯ ಗಮನಕ್ಕೆ ಬಂದಿಲ್ಲ ಎಂಬ ಆರೋಪವಿದೆ.

ಶಾಸಕ ಎಚ್‌.ಆರ್. ಗವಿಯಪ್ಪ ಅವರ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ನಗರದಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ 11.81 ಕಿ.ಮೀ.ರಸ್ತೆಯನ್ನು ₹10.60 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡುತ್ತಿದೆ. ಇದರ ಜೊತೆಗೆ ನಗರದ ಹೊರವಲಯದ ಹೊಸಮಲಪನಗುಡಿಯಿಂದ ಕೆರೆತಾಂಡಾದವರೆಗೆ 6.90 ಕಿ.ಮೀ. ರಸ್ತೆಯನ್ನು ₹6.90 ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣವನ್ನೂ ನಡೆಸುತ್ತಿದೆ. ಈ ಮೂಲಕ 18.71 ಕಿ.ಮೀ. ಉದ್ದದ ವಿವಿಧ ರಸ್ತೆಗಳನ್ನು ವಿವಿಧ ಗುತ್ತಿಗೆದಾರರಿಂದ ಮರುಡಾಂಬರೀಕರಣ, ರಸ್ತೆ ಬದಿಯಲ್ಲಿ ಫೆವರ್ಸ್ ಅಳವಡಿಕೆ ಹಾಗೂ ರಸ್ತೆಗಳ ಅಭಿವೃದ್ಧಿ ಕೆಲಸ ನಡೆದಿದೆ.

ಜಂಬುನಾಥಹಳ್ಳಿಯ ನೂತನ 250 ಹಾಸಿಗೆ ಆಸ್ಪತ್ರೆಯಿಂದ ಕಾಲುವೆವರೆಗೆ ಮತ್ತು ಸಂಡೂರು ರಸ್ತೆಯವರೆಗೆ ರಸ್ತೆ ಕಾಮಗಾರಿ ಶಾಸಕರಿಂದಲೇ ಉದ್ಘಾಟನೆಗೊಂಡಿದೆ. ಕಮಲಾಪುರದ ಮ್ಯೂಸಿಯಂ ರಸ್ತೆ, ಬುಕ್ಕಸಾಗರದ ಏಳು ಹೆಡೆ ನಾಗಪ್ಪ ದೇವಸ್ಥಾನ ರಸ್ತೆ ಸಹಿತ ಇನ್ನೂ ಕೆಲವೆಡೆ ಶಾಸಕರ ಮುತುವರ್ಜಿಯಿಂದ ರಸ್ತೆಗಳ ಅಭಿವೃದ್ಧಿ, ಮರುಡಾಂಬರೀಕರಣ ನಡೆಯುತ್ತಿದೆ. ಇದೆಲ್ಲ ಸೇರಿ ಒಟ್ಟು ಸುಮಾರು ₹23 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ, ಮರುಡಾಂಬರೀಕರಣ ನಡೆಯುತ್ತಿದೆ.

ADVERTISEMENT

ಅಧ್ಯಕ್ಷರ ಆಕ್ಷೇಪ: ‘ರಸ್ತೆಗಳ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಆದರೆ ನಗರದ ಹಲವೆಡೆ ಒಳಚರಂಡಿ ಪೈಪ್‌ಲೈನ್‌ ಹೋಗುತ್ತದೆ, ಕೆಲವಡೆ ಹೊಸ ಪೈಪ್‌ಲೈನ್ ಅಳವಡಿಕೆಯಂತಹ ಕೆಲಸಗಳು ಇರುತ್ತವೆ. ನಗರಸಭೆ ಗಮನಕ್ಕೆ ತಂದು ಕೆಲಸ ಮಾಡಿದ್ದರೆ ಪದೇ ಪದೇ  ರಸ್ತೆ ಅಗೆಯುವ ಪ್ರಮೇಯ ಬರುತ್ತಿರಲಿಲ್ಲ. ನಮ್ಮನ್ನು ಕಡೆಗಣಿಸಿ ಕೆಲಸ ಮಾಡಿರುವ ಬಗ್ಗೆ ನಗರಸಭೆಯಲ್ಲಿ ನಿರ್ಣಯ ಕೈಗೊಂಡು, ಶಾಸಕರಿಗೆ ಪತ್ರ ಬರೆಯಲಿದ್ದೇವೆ’ ಎಂದು ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್ ಹೇಳಿದರು.

ಶಾಸಕರ ನಿರಾಕರಣೆ: ‘ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳ ಅಭಿವೃದ್ಧಿ, ಮರುಡಾಂಬರೀಕರಣ ವಿಷಯದಲ್ಲಿ ನಗರಸಭೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಕಸ ವಿಲೇವಾರಿ, ಚರಂಡಿ ಸ್ವಚ್ಛಗೊಳಿಸುವುದು ಸೇರಿ ಅವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಅದನ್ನು ಸಮರ್ಪಕವಾಗಿ ಮಾಡಲಿ’ ಎಂದು ಶಾಸಕ ಗವಿಯಪ್ಪ ಪ್ರತಿಕ್ರಿಯಿಸಿದರು.

ಮೂರು ವರ್ಷದ ಬಳಿಕ ರಸ್ತೆಗಳಿಗೆ ಟಾರು ಭಾಗ್ಯ ಈ ಹಿಂದೆ ಇದ್ದಂತೆ ರಸ್ತೆ ಉಬ್ಬು ನಿರ್ಮಾಣ ಮೂರ್ನಾಲ್ಕು ಗುತ್ತಿಗೆದಾರರಿಂದ ಕೆಲಸ

- ಜನ ವಾಹನಗಳ ಸಂಚಾರಕ್ಕೆ ಅಡಚಣೆ ಆಗದಂತೆ ನಗರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ₹23 ಕೋಟಿ ವೆಚ್ಚದಲ್ಲಿ ಆ ಕೆಲಸ ಆಗುತ್ತಿದೆ
ಎಚ್‌.ಆರ್‌.ಗವಿಯಪ್ಪ ಶಾಸಕ
ಮರುಡಾಂಬರೀಕರಣದ ಬಳಿಕ ಎಲ್ಲೆಲ್ಲೆ ರಸ್ತೆ ಉಬ್ಬುಗಳಿದ್ದವೋ ಅಲ್ಲೆಲ್ಲ ಅವುಗಳನ್ನು ಮರು ನಿರ್ಮಿಸಲಾಗುವುದು. ಶಾಸಕರ ಸೂಚನೆಯಂತೆ ಈ ಎಲ್ಲ ಕಾಮಗಾರಿ ನಡೆಯುತ್ತಿದೆ. ವಾರದೊಳಗೆ ಪೂರ್ಣವಾಗಲಿದೆ.
ರವಿ ನಾಯ್ಕ್ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.