ಹೊಸಪೇಟೆ (ವಿಜಯನಗರ): ತುಂಗಭದ್ರಾ ಕ್ರೆಸ್ಟ್‌ಗೇಟ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನೀಡಿದ್ದ ₹10 ಕೋಟಿಯನ್ನು ವಾಪಸ್ ಪಡೆದಿಲ್ಲ, ಗೇಟ್ ತಜ್ಞ ಕನ್ಹಯ್ಯ ನಾಯ್ಡು ಈ ಬಗ್ಗೆ ಆರೋಪ ಮಾಡಿದ್ದರೆ ಅದರ ಬಗ್ಗೆ ವಿಚಾರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಗಣರಾಜ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯನ್ನುದ್ದೇಶಿಸಿ ಮಾತನಾಡಿದ ಅವರು ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.
‘ತುಂಗಭದ್ರಾ ಅಣೆಕಟ್ಟೆಯಲ್ಲಿ 33 ಗೇಟ್‌ಗಳಿವೆ. ಇದರಲ್ಲಿ 18 ಗೇಟ್‌ಗಳು ಆಂಧ್ರಕ್ಕೆ ಸೇರಿದ್ದರೆ, ಉಳಿದ 15 ಗೇಟ್‌ಗಳು ಕರ್ನಾಟಕಕ್ಕೆ ಸೇರಿವೆ. ಗೇಟ್ ನಿರ್ಮಾಣಕ್ಕೆ ಆಂಧ್ರಪ್ರದೇಶ ಸರ್ಕಾರ ₹28 ಕೋಟಿ ಕೊಡಬೇಕು, ರಾಜ್ಯ ₹26 ಕೋಟಿ ಕೊಡಬೇಕು. ಆಂಧ್ರ ಇದುವರೆಗೆ ₹20 ಕೋಟಿ ಕೊಟ್ಟಿದೆ, ರಾಜ್ಯ ₹10 ಕೋಟಿ ನೀಡಿದೆ. ಉಳಿದ ದುಡ್ಡನ್ನು ಹಂತ ಹಂತವಾಗಿ ನೀಡಲಾಗುವುದು, ಆಂಧ್ರ ಸಹ ತನ್ನ ಪಾಲಿನ ₹8 ಕೋಟಿ ನೀಡುವುದು ಬಾಕಿ ಇದೆ’ ಎಂದು ಸಚಿವರು ಹೇಳಿದರು.
ಕನ್ಹಯ್ಯ ನಾಯ್ಡು ಅವರು ಆಂಧ್ರ ಸರ್ಕಾರ ತನ್ನ ಪಾಲಿನ ದುಡ್ಡನ್ನು ಕೊಟ್ಟಿರುವುದನ್ನು ಹಾಗೂ ರಾಜ್ಯ ಸರ್ಕಾರ ತಾನು ನೀಡಿದ ₹10 ಕೋಟಿಯನ್ನು ವಾಪಸ್ ಪಡೆದಿರುವ ಬಗ್ಗೆ ಹೇಳಿಕೆ ನೀಡಿದ್ದನ್ನು ಸಚಿವರಿಗೆ ಮತ್ತೆ ಮತ್ತೆ ನೆನಪಿಸಲಾಯಿತು. ರಾಜ್ಯ ಸರ್ಕಾರ ದುಡ್ಡು ಹಿಂದಕ್ಕೆ ಪಡದಿಲ್ಲ ಎಂದು ಒತ್ತಿ ಹೇಳಿದ ಸಚಿವರು, ಬಳಿಕ ಅದರ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು.
5 ಗೇಟ್ ಸಿದ್ಧ: ಅಣೆಕಟ್ಟೆಯಲ್ಲಿ 1 ಕ್ರೆಸ್ಟ್‌ಗೇಟ್ ಮಾತ್ರ ಪೂರ್ಣಪ್ರಮಾಣದಲ್ಲಿ ಅಳವಡಿಕೆ ಆಗಿದ್ದರೂ ಸಚಿವರು 5 ಗೇಟ್ ಅಳವಡಿಕೆ ಆಗಿದೆ ಎಂದು ಹೇಳಿಕೊಂಡರು. ‘ಐದು ಗೇಟ್ ಅಳವಡಿಕೆ ಆಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ, ನಾನು ಈಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾಗ ಎರಡು ಗೇಟ್ ಪೂರ್ಣಗೊಂಡಿದ್ದನ್ನು ನೋಡಿದ್ದೇನೆ’ ಎಂದರು.
80 ಸಾವಿರ ಮನೆ ನೀಡಿಕೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಕೊಳೆಗೇರಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯಡಿಯುಲ್ಲಿ 80 ಸಾವಿರ ಮನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಯನ್ನೂ ಕೊಟ್ಟಿರಲಿಲ್ಲ, ಮನೆಗಳನ್ನೂ ಕೊಟ್ಟಿರಲಿಲ್ಲ. ನಾವೂ ಎರಡನ್ನೂ ಕೊಟ್ಟಿದ್ದೇವೆ, ಬಡವರ ಪರವಾಗಿ ಕೆಲಸ ಮಾಡುವ ನಿಜವಾದ ಸರ್ಕಾರ ನಮ್ಮದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎಂದು ಸಚಿವ ಜಮೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.