ಹೊಸಪೇಟೆ (ವಿಜಯನಗರ): ಕಡೆಯ ಶ್ರಾವಣ ಸೋಮವಾರ ಪ್ರಯುಕ್ತ ಹಂಪಿ ವಿರೂಪಾಕ್ಷೇಶ್ವರ, ಜಂಬುನಾಥೇಶ್ವರ ಸಹಿತ ತಾಲ್ಲೂಕಿನ ಎಲ್ಲ ಶಿವಕ್ಷೇತ್ರಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಶಿವನ ದರ್ಶನ ಪಡೆದರು.
ನಗರದ ಹೊರವಲಯದ ಜಂಬುನಾಥ ಗುಡ್ಡದಲ್ಲಿರುವ ಜಂಬುನಾಥನ ದರ್ಶನಕ್ಕೆ ಎಂಟು ಸಾವಿರಕ್ಕೂ ಅಧಿಕ ಮಂದಿ ಬಂದಿದ್ದರು. ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾರ್ಯ ಸಾಗಿದ್ದು, ಅರ್ಧ ಭಾಗಕ್ಕೆ ರಸ್ತೆ ನಿರ್ಮಾಣವಾಗಿದೆ, ಇನ್ನರ್ಧ ಭಾಗ ಬಾಕಿ ಇದ್ದು, ವಾಹನಗಳು ಸರಾಗವಾಗಿ ಸಂಚರಿಸುವುದಕ್ಕೆ ಅವಕಾಶ ಆಗಿದೆ. ಹೀಗಾಗಿ ಬಹಳ ಅಪರೂಪಕ್ಕೆ ಎಂಬಂತೆ ಭಾರಿ ಸಂಖ್ಯೆಯಲ್ಲಿ ಭಕ್ತರು ಜಂಬುನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು.
ಬೆಳಿಗ್ದೆ 8 ಗಂಟೆಗೆ ಆರಂಭವಾದ ಪ್ಗಸಾದ ವಿತರಣೆ ಸಂಜೆ 7 ಗಂಟೆಯವರೆಗೂ ಮುಂದುವರಿಯಿತು.
ಹೊಸಪೇಟೆ ತಾಲ್ಲೂಕು ಮತ್ತು ಸುತ್ತಮುತ್ತ ಪಂಚಲಿಂಗ ಕ್ಷೇತ್ರಗಳಿವೆ. ಜಂಬುನಾಥ ಕ್ಷೇತ್ರವೂ ಅದರಲ್ಲಿ ಒಂದು. ಪಂಚಲಿಂಗಗಳ ಕೇಂದ್ರ ಬಿಂದು ಎಂದೇ ಪರಿಗಣಿಸಲಾಗಿರುವ ಹಂಪಿ ವಿರೂಪಾಕ್ಷನ ದರ್ಶನಕ್ಕೂ ಸಾವಿರಾರು ಮಂದಿ ಭಕ್ತರು ಬಂದಿದ್ದರು. ವಿಷ್ಣು ಸೇವಾ ಸಮಿತಿಯವರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಸೇವೆ ನಡೆಯಿತು. ಹಂಪಿಯ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಮಕ್ಕಳಿಗೆ ಕೆಲವು ಮಂತ್ರಗಳು, ಶ್ಲೋಕಗಳನ್ನು ಅಭ್ಯಾಸ ಮಾಡಿಸಿ, ಅವರ ಜ್ಞಾಪಕ ಶಕ್ತಿ ಹೆಚ್ಚುವುದು ನಿಶ್ಚಿತ ಎಂದು ಸೇವಾ ಸಮಿತಿಯವರಿಗೆ ತಿಳಿಸಿದರು.
ಗೈಡ್‌ಗಳಿಂದ ಅನ್ನಸಂತರ್ಪಣೆ: ಹಂಪಿಯಲ್ಲಿ ವಿರೂಪಾಕ್ಷೇಶ್ವರ ಸ್ವಾಮಿಯ ಬೆಳ್ಳಿ ಬಸವಣ್ಣ ಆಚರಣೆಯೂ ಸೋಮವಾರ ನಡೆಯಿತು. ಅದರ ಪ್ರಯುಕ್ತ ಪ್ರವಾಸಿ ಮಾರ್ಗದರ್ಶಕರ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಮೂರು ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸೇವಿಸಿದರು.
ಪಂಚಲಿಂಗ: ಇತರ ಪಂಚಲಿಂಗ ಕ್ಷೇತ್ರಗಳಾದ ವಾಣಿಭದ್ರೇಶ್ವರ, ಸೋಮೇಶ್ವರ, ಕಿನ್ನಾರೇಶವರ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿತರಣೆ ನಡೆಯಿತು.
ನಗರದ ವಡಕರಾಯ ದೇವಸ್ಥಾನದ ಜಂಬುಕೇಶ್ವರ, ಎಂ.ಜೆ.ನಗರದ ಮಾರ್ಕಂಡೇಶ್ವರ, ರಾಮಾಟಾಕೀಸ್ ಸಮೀಪದ ನೀಲಕಂಠೇಶ್ವರ, ಮೇನ್ ಬಜಾರ್‌ನ ನಗರೇಶ್ವರ, ಹಂಪಿ ರಸ್ತೆಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಈಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು.
ಸಾಮೂಹಿಕ ಮೃತ್ತಿಕಾ ಲಿಂಗ ಪೂಜೆ
ಹಂಪಿ ರಸ್ತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಶಿವನ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಮೃತ್ತಿಕಾ ಲಿಂಗ ತಯಾರಿಸಿ ಪೂಜೆ ಮಾಡಿದ್ದು ವಿಶೇಷವಾಗಿತ್ತು. ನೂರಾರು ಭಕ್ತರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹಾಗೂ ನೋಡಿ ಪುನೀತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.