ಹೊಸಪೇಟೆ (ವಿಜಯನಗರ): ‘ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶವು ಎರಡನೇ ಸಿದ್ದರಾಮೋತ್ಸವವಾಗಿ ಹೊರಹೊಮ್ಮೊಲಿದೆ. ಮೊದಲನೇ ಸಿದ್ದರಾಮೋತ್ಸವ ದಾವಣಗೆರೆಯಲ್ಲಿ ಈಗಾಗಲೇ ಜರುಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
‘ಸಮಾವೇಶಕ್ಕೆ ರಾಜ್ಯ ಸಾರಿಗೆ ಸಂಸ್ಥೆಯ 3,700 ಬಸ್‌ಗಳನ್ನು ಕಾಯ್ದಿರಿಸಲಾಗಿದೆ. ಪ್ರತ್ಯೇಕವಾಗಿ ನಾನು 2,000 ಬಸ್‌ಗಳನ್ನು ಕಾಯ್ದಿರಿಸಿದ್ದೇನೆ. ಹಲವು ಶಾಸಕರು ಶಾಲಾ, ಕಾಲೇಜು ಬಸ್‌ಗಳನ್ನೂ ಬಳಸುತ್ತಾರೆ. ಹೀಗಾಗಿ 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘1.50 ಲಕ್ಷ ಕುರ್ಚಿಗಳನ್ನು ಹಾಕಿ, 2 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಬೆಳಿಗ್ಗೆ 9 ರಿಂದ ಒಟ್ಟು 500 ಕೌಂಟರ್‌ಗಳಲ್ಲಿ ಊಟ ಬಡಿಸಲಾಗುವುದು. ತುರ್ತು ಅಗತ್ಯಕ್ಕೆ 50 ಸಾವಿರ ಊಟದ ಪ್ಯಾಕೆಟ್ ಸಿದ್ಧಪಡಿಸಲಾಗುವುದು. 5 ಲಕ್ಷ ನೀರಿನ ಪ್ಯಾಕೆಟ್ ತರಿಸಲಾಗುವುದು. ಹೊಸಪೇಟೆ ಸುತ್ತಮುತ್ತ 200 ಎಕರೆ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.
‘140x60 ಅಡಿ ವಿಸ್ತೀರ್ಣದ ವೇದಿಕೆ ನಿರ್ಮಾಣವಾಗಲಿದ್ದು, ಮಧ್ಯಭಾಗದ ಪ್ರಧಾನ ವೇದಿಕೆಯಲ್ಲಿ 300 ಮಂದಿ ಆಸೀನರಾಗುವರು. ಎಡ, ಬಲ ಬದಿಯ ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ 50 ಮಂದಿ ಕೂರುವ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ಆರಂಭವಾಗಿ, ಮಧ್ಯಾಹ್ನ 2ರ ವೇಳೆಗೆ ಮುಕ್ತಾಯವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.