ADVERTISEMENT

ಹಲವು ನೋವು ಉಂಡ ‘ಶಿವಲೀಲಾ’ ಚಿತ್ರತಂಡ

ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲೊಂದು ಸಿನಿಮಾ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:42 IST
Last Updated 19 ನವೆಂಬರ್ 2025, 4:42 IST
ಅಶೋಕ್‌ ಜೈರಾಮ್‌
ಅಶೋಕ್‌ ಜೈರಾಮ್‌   

ಹೊಸಪೇಟೆ: ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲಿನ ಸಿನಿಮಾ ‘ಶಿವಲೀಲಾ (ಬೂದಿ ಮುಚ್ಚಿದ ಕೆಂಡ)’  ಜನವರಿ 1ರಂದು ಬಿಡುಗಡೆಯಾಗಲಿದೆ, ಆದರೆ ಚಿತ್ರದ ನಿರ್ಮಾಣದಲ್ಲಿ ಹಲವು ನೋವುಗಳನ್ನು ಚಿತ್ರತಂಡ ಉಂಡಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಅಶೋಕ್‌ ಜೈರಾಮ್‌ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಪೋಸ್ಟರ್ ಬಿಡುಗಡೆ ಬುಧವಾರ (ನ.19) ನಗರದಲ್ಲಿ ನಡೆಯಲಿದೆ. ಸುಮಾರು ₹ 2 ಕೋಟಿ ಬಜೆಟ್‌ನ ಈ ಸಿನಿಮಾದಲ್ಲಿ ಮೂರು ಹಾಡುಗಳಿವೆ. ರಾಜ್ಯದಾದ್ಯಂತ ಸುಮಾರು 150 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಕನ್ನಡ, ತಮಿಳು, ತೆಲುಗು, ಮಲಯಾಳ, ತುಳು ಸಹಿತ ಒಟ್ಟು 9 ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ ಎಂದರು.

4 ವರ್ಷದ ಯೋಜನೆ: ‘ಸಿನಿಮಾ ತಯಾರಿಸುವ ಯೋಜನೆ ರೂಪಿಸಿ ನಾಲ್ಕು ವರ್ಷ ಕಳೆಯಿತು, ಆದರೆ ಅನೇಕ ಸವಾಲುಗಳು, ಕಷ್ಟಗಳನ್ನು ಸಿನಿಮಾ ಶೂಟಿಂಗ್ ವೇಳೆ ಅನುಭವಿಸಬೇಕಾಯಿತು. ಲಿಂಗತ್ವ ಅಲ್ಪಸಂಖ್ಯಾತರು ಮಾಡಿದ ಅಡುಗೆ ಉಣ್ಣುವುದಿಲ್ಲ, ಅವರನ್ನು ಕಂಡರೆ ಭಯ ಮುಂತಾಗಿ ಹಲವು ಅಭಿಪ್ರಾಯಗಳನ್ನು ಹೊಂದಿದ್ದ ಕಲಾವಿದರು, ತಂತ್ರಜ್ಞರನ್ನು ನಿಭಾಯಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿತ್ತು, ಆದರೂ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ನವೆಂಬರ್ 30ರಂದು ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ’ ಎಂದು ಅಶೋಕ್ ಹೇಳಿದರು.

ADVERTISEMENT

ಸಿನಿಮಾದ ನಾಯಕ ನಟ ದಚ್ಚು ದಿವಾಕರ್, ನಾಯಕ ನಟಿ ಸಂಸ್ಕೃತಿ ಲಕ್ಷ್ಮಣ, ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನುಷ್‌ ತಮ್ಮ ಅನುಭವ ಹಂಚಿಕೊಂಡು ಚಿತ್ರವನ್ನು ನೋಡಿ ಪ್ರೋತ್ಸಾಹಿಸಲು ಮನವಿ ಮಾಡಿದರು. ಸಿನಿಮಾದಲ್ಲಿ ಪಾತ್ರ ಸಹಿತ ವಿವಿಧ ಹೊಣೆಗಾರಿಕೆ ನಿಭಾಯಿಸಿದ ವಿನುತಾ ಮಂಡ್ಯ, ಪವಿತ್ರಾ ಸಹ ಬೆಂಬಲ ಯಾಚಿಸಿದರು.

ಹೊಸಪೇಟೆಯಲ್ಲಿ ಮಂಗಳವಾರ ‘ಶಿವಲೀಲಾ’ ಸಿನಿಮಾ ಕುರಿತು ಮಾಹಿತಿ ನೀಡಿದ ಚಿತ್ರತಂಡ

ತಾಯಿ ಪಾತ್ರದಲ್ಲಿ ಮಂಜಮ್ಮ ಜೋಗತಿ

ರಂಗಬೂಮಿ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ನೋವು ಅವಮಾನ ಸಹಿತ ಹಲವು ಆಯಾಮಗಳನ್ನು ಈ ಚಿತ್ರ ಒಳಗೊಂಡಿದೆ. 300ಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರ ಸಹಿತ ಸುಮಾರು 850 ಮಂದಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ ತಾಯಿಯ ಪಾತ್ರವೊಂದರಲ್ಲಿ ತಾವು ತೆರೆಯ ಮೇಲೆ ಕಾಣಿಸಿಕೊಂಡಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.