ADVERTISEMENT

ಹೊಸಪೇಟೆ | ₹6 ಕೋಟಿಯಲ್ಲಿ ಧ್ವಜ ಸ್ತಂಭ ಸ್ಥಾಪನೆ!

ಒಂದೇ ಊರಿನಲ್ಲಿ ನಾಲ್ಕನೇ ಧ್ವಜ ಸ್ತಂಭ ನಿರ್ಮಾಣಕ್ಕೆ ಭರದ ಕಾಮಗಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜುಲೈ 2022, 20:00 IST
Last Updated 6 ಜುಲೈ 2022, 20:00 IST
₹6 ಕೋಟಿಯಲ್ಲಿ ಹೊಸಪೇಟೆ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಾಣ ಕಾರ್ಯ ಮಂಗಳವಾರ ರಾತ್ರಿಯೂ ನಡೆಯಿತು–ಪ್ರಜಾವಾಣಿ ಚಿತ್ರ
₹6 ಕೋಟಿಯಲ್ಲಿ ಹೊಸಪೇಟೆ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಾಣ ಕಾರ್ಯ ಮಂಗಳವಾರ ರಾತ್ರಿಯೂ ನಡೆಯಿತು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ನಗರದಲ್ಲಿ ಈಗಾಗಲೇ ಮೂರು ಧ್ವಜ ಸ್ತಂಭಗಳನ್ನು ಸ್ಥಾಪಿಸಲಾಗಿದ್ದು, ಈಗ ₹6 ಕೋಟಿಯಲ್ಲಿ ಮತ್ತೊಂದು ಸ್ಥಾಪಿಸಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ನಗರದ ಕ್ರೀಡಾಂಗಣದ ಮಧ್ಯ ಭಾಗದಲ್ಲಿ ₹6 ಕೋಟಿಯಲ್ಲಿ 405 ಅಡಿ ಎತ್ತರದ ಬೃಹತ್‌ ಧ್ವಜ ಸ್ತಂಭ ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಅನುದಾನ ಮಂಜೂರಾಗಿದೆ. ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ. ಆದರೆ, ಅದಕ್ಕೂ ಮುನ್ನವೇ ಭರದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಜೆ.ಸಿ.ಬಿ.ಗಳಿಂದ 25 ಅಡಿ ಆಳದ ಗುಂಡಿ ಅಗೆಯಲಾಗಿದ್ದು, 12X12 ಅಡಿ ಗಟ್ಟಿ ಅಡಿಪಾಯ ನಿರ್ಮಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆದಿದೆ.

ನಗರದ ಜೋಳದರಾಶಿ ಗುಡ್ಡ, ಪುನೀತ್‌ ರಾಜಕುಮಾರ್‌ ವೃತ್ತ, ರೈಲು ನಿಲ್ದಾಣದಲ್ಲಿ ಈಗಾಗಲೇ 100 ಅಡಿ ಎತ್ತರದ ಧ್ವಜ ಸ್ತಂಭಗಳನ್ನು ಸ್ಥಾಪಿಸಲಾಗಿದೆ. ಒಂದಕ್ಕೆ ತಲಾ ₹50 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ರೈಲು ನಿಲ್ದಾಣ ರಸ್ತೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಇನ್ನೊಂದು ಧ್ವಜ ಸ್ತಂಭ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗ 405 ಅಡಿ ಎತ್ತರದ ಮತ್ತೊಂದು ಧ್ವಜ ಸ್ತಂಭಕ್ಕೆ ಆರು ಕೋಟಿ ವೆಚ್ಚ ಮಾಡಲಾಗುತ್ತಿದೆ.

ADVERTISEMENT

ಜನರ ತೆರಿಗೆ ಹಣ ಬೇಕಾಬಿಟ್ಟಿ ಖರ್ಚು ಮಾಡುತ್ತಿರುವುದು ಸರಿಯಲ್ಲ. ಇದೇ ಹಣದಿಂದ ಹೊಸ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಖರ್ಚು ಮಾಡಬಹುದಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

‘ಜನರ ಜೀವನ ಮಟ್ಟ ಸುಧಾರಿಸುವ ಕೆಲಸವಾಗಬೇಕು. ಇದಕ್ಕೆ ದೇಶಭಕ್ತಿ ಎಂದು ಹೇಳಲಾಗುವುದಿಲ್ಲ. ಹಸಿವು, ನಿರುದ್ಯೋಗ, ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜನರನ್ನು ಮರಳು ಮಾಡುವ ಕೆಲಸ ಮಾಡಲಾಗುತ್ತಿದೆ. ಹೊಸಪೇಟೆಯೊಂದರಲ್ಲೇ ನಿವೇಶನ, ಮನೆ ಇಲ್ಲದವರು 25,000ಕ್ಕೂ ಹೆಚ್ಚು ಕುಟುಂಬಗಳಿವೆ. ಆ ದುಡ್ಡಿನಿಂದ ಬಡವರಿಗೆ ಮನೆ ಕಟ್ಟಿಸಿಕೊಟ್ಟರೆ ಅದು ನಿಜವಾದ ದೇಶಭಕ್ತಿ ಅನಿಸಿಕೊಳ್ಳುತ್ತಿತ್ತು’ ಎಂದು ಸಾಮಾಜಿಕ ಕಾರ್ಯಕರ್ತ ಮರಡಿ ಜಂಬಯ್ಯ ನಾಯಕ ತಿಳಿಸಿದರು.

‘ಈಗಾಗಲೇ ನಗರದ ಮೂರು ಕಡೆಗಳಲ್ಲಿ ಧ್ವಜ ಸ್ತಂಭ ಇದೆ. ಮತ್ತೊಂದು ಅಗತ್ಯವಿರಲಿಲ್ಲ. ಅದು ಕೂಡ ಕ್ರೀಡಾಂಗಣದ ಮಧ್ಯ ಭಾಗದಲ್ಲಿ ನಿರ್ಮಿಸುತ್ತಿರುವುದು ಸರಿಯಲ್ಲ’ ಎಂದು ವಿಜಯನಗರ ಜಿಲ್ಲಾ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್‌ ಬಣ್ಣದಮನೆ ಅಭಿಪ್ರಾಯಪಟ್ಟರು.

‘ಧ್ವಜ ಸ್ತಂಭ ಸ್ಥಾಪಿಸುವುದರಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ಧ್ವಜ, ದೇಶಭಕ್ತಿ ಹೆಸರಿನಲ್ಲಿ ಲಾಭದಾಯಕ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ವೈಯಕ್ತಿಕ ಆಸ್ತಿಯ ಬೆಲೆ ಹೆಚ್ಚಿಸುವುದಕ್ಕಾಗಿ ಹೊಸಪೇಟೆ ಜಿಲ್ಲಾ ಕೇಂದ್ರ ಮಾಡಲಾಯಿತು. ಈಗ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ ಟೀಕಿಸಿದರು.

ಈ ಸಂಬಂಧ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಧ್ವಜ ಸ್ತಂಭ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಮಂಜೂರಾಗಿದೆ. ಆ ಹಣ ಆ ಉದ್ದೇಶಕ್ಕಾಗಿಯೇ ಮೀಸಲಾಗಿರುವುದರಿಂದ ಅದಕ್ಕಾಗಿ ಬಳಸಲಾಗುತ್ತಿದೆ. ಅನ್ಯ ಉದ್ದೇಶಕ್ಕೆ ಬಳಸಲು ಆಗುವುದಿಲ್ಲ. ಗುಜರಾತಿನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಎತ್ತರದ ಪ್ರತಿಮೆ ಸ್ಥಾಪಿಸಿದ ನಂತರ ಅಲ್ಲಿನ ಪ್ರವಾಸೋದ್ಯಮದ ಚಹರೆಯೇ ಬದಲಾಗಿದೆ. ಅದೇ ರೀತಿ ಇಲ್ಲೂ ಅನುಕೂಲವಾಗಲಿದೆ. ಪ್ರತಿಯೊಂದನ್ನೂ ಟೀಕಿಸುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರನ್ನು ಸಂಪರ್ಕಿಸಿದಾಗ, ‘ಧ್ವಜ ಸ್ತಂಭ ಸ್ಥಾಪಿಸುವ ವಿಚಾರ ಗೊತ್ತಿದೆ’ ಎಂದಷ್ಟೇ ಪ್ರತಿಕ್ರಿಯಿಸಿ ನುಣುಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.