ADVERTISEMENT

ಹಾವು ರಕ್ಷಿಸುವ ಆಪ್ತಮಿತ್ರ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 5 ಜೂನ್ 2021, 15:26 IST
Last Updated 5 ಜೂನ್ 2021, 15:26 IST
ಕಂಪ್ಲಿ ತುಂಗಭದ್ರಾ ನದಿ ಬಳಿ ಗುಡಿಸಲು ಪ್ರವೇಶಿಸುತ್ತಿದ್ದ ನಾಗರಹಾವನ್ನು ಮಂಜುನಾಥ ಆಚಾರ್ ಸೆರೆ ಹಿಡಿದಿರುವುದು
ಕಂಪ್ಲಿ ತುಂಗಭದ್ರಾ ನದಿ ಬಳಿ ಗುಡಿಸಲು ಪ್ರವೇಶಿಸುತ್ತಿದ್ದ ನಾಗರಹಾವನ್ನು ಮಂಜುನಾಥ ಆಚಾರ್ ಸೆರೆ ಹಿಡಿದಿರುವುದು   

ಕಂಪ್ಲಿ: ನಗರದಲ್ಲಿ ಎಲ್ಲೇ ಹಾವು ಕಂಡರೂ ಅಲ್ಲಿ ಕೆಲವೇ ನಿಮಿಷಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ಎಂತಹುದೇ ಮೂಲೆಯಲ್ಲಿ ಅವಿತುಕೊಂಡರೂ ಅದನ್ನು ಹೊರಗೆ ತೆಗೆದು, ಸಂರಕ್ಷಿಸಿ ಕಾಡಿಗೆ ಬಿಡುತ್ತಾರೆ. ಜನರ ಪಾಲಿಗೆ ಇವರು ಆಪ್ತಮಿತ್ರ.

ವೃತ್ತಿಯಿಂದ ಅಕ್ಕಸಾಲಿಗರಾಗಿರುವ ಪಟ್ಟಣದ ಎಂ. ಮಂಜುನಾಥ ಆಚಾರ್‌ ಅವರಿಗೆ ಜನ ಕೊಟ್ಟಿರುವ ಬಿರುದಾಂಕಿತ ಇದು.

ನಾಗರಹಾವು, ಕೆರೆ ಹಾವು, ಮಣ್ಣು ಮುಕ್ಕುವ ಹಾವು ಸೇರಿದಂತೆ ವಿವಿಧ ಜಾತಿಯ 700 ಹಾವುಗಳನ್ನು ಸಂರಕ್ಷಿಸಿ ಅರಣ್ಯದೊಳಗೆ ಬಿಟ್ಟಿರುವ ಕೀರ್ತಿ ಇವರದು. ಉರಗಗಳನ್ನು ರಕ್ಷಿಸಲು ಹೋಗಿ ಅನೇಕ ಸಲ ಕಚ್ಚಿಸಿಕೊಂಡು, ಚಿಕಿತ್ಸೆ ಪಡೆದು ಮರುಜನ್ಮ ಕೂಡ ಪಡೆದಿದ್ದಾರೆ. ಇಷ್ಟೆಲ್ಲ ಆದರೂ ಹಾವುಗಳನ್ನು ರಕ್ಷಿಸುವ ಕಾಯಕದಿಂದ ಹಿಂದೆ ಸರಿದಿಲ್ಲ.

ADVERTISEMENT

ಮನೆ, ಗುಡಿಸಲು, ವಠಾರ, ಬಹುಮಹಡಿ ಕಟ್ಟಡ, ಉದ್ಯಾನ, ಅಕ್ಕಿ ಗಿರಣಿ, ಉಗ್ರಾಣ ಹೀಗೆ ಎಲ್ಲೇ ಹಾವುಗಳು ಬಂದಿವೆ ಎಂದು ಸುದ್ದಿ ಕಿವಿಗೆ ಬಿದ್ದರೆ ತಕ್ಷಣವೇ ಅಲ್ಲಿಗೆ ಹೋಗಿ ರಕ್ಷಿಸುತ್ತಾರೆ.
‘ಹಾವು ಬಂದರೆ ಭಯಪಡಬೇಡಿ. ಅವುಗಳಿಗೂ ನಮ್ಮಂತೆಯೇ ಜೀವ ಭಯ ಇರುತ್ತದೆ. ಗಾಬರಿಯಲ್ಲಿ ಅವುಗಳನ್ನು ಸಾಯಿಸುವುದು ತಪ್ಪು’ ಎಂಬ ಉಪದೇಶವೂ ನೀಡಿ, ತಿಳಿವಳಿಕೆ ಮೂಡಿಸುತ್ತಾರೆ.

20 ವರ್ಷಗಳ ಹಿಂದೆ ಹೊಸಪೇಟೆಯ ವಿಜಯಲಕ್ಷ್ಮಿ ಪಣಿಕ್ಕರ್‌ ದಾಸ್‌ ಅವರಿಂದ ಹಾವು ಹಿಡಿಯುವುದನ್ನು ಕಲಿತಿರುವ ಮಂಜುನಾಥ, ತಮ್ಮ ವೃತ್ತಿಯೊಂದಿಗೆ, ಇದನ್ನು ಪ್ರವೃತ್ತಿಯಾಗಿ ಮುಂದುವರೆಸಿದ್ದಾರೆ.
‘ಹಾವು ಹಿಡಿಯುವುದಕ್ಕೆ ಗರುಡರೇಖೆ ಬೇಕಿಲ್ಲ. ಅದು ಒಂದು ಕಲೆ. ಇಲ್ಲಿಯವರೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಕಾಯಕ ಮಾಡುತ್ತ ಬಂದಿರುವೆ. ಕಂಪ್ಲಿ ಸುತ್ತಮುತ್ತ ಸಾಕಷ್ಟು ಹಾವುಗಳಿವೆ. ಅವುಗಳನ್ನು ಸಂರಕ್ಷಿಸಿ ಇಡಲು ‘ಸ್ನೇಕ್‌ ಪಾರ್ಕ್‌’ ನಿರ್ಮಿಸಬೇಕು’ ಎನ್ನುತ್ತಾರೆ ಮಂಜುನಾಥ.

ಮಂಜುನಾಥ ಅವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ: 74119 91318ಕ್ಕೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.