ಹೊಸಪೇಟೆ (ವಿಜಯನಗರ): ‘ಹೊಸ ಜಿಲ್ಲೆಯಲ್ಲಿ ಪೊಲೀಸರಿಗೆ ಮೂಲಸೌಲಭ್ಯ ಒದಗಿಸುವುದು ಸುಲಭದ ಕೆಲಸವಲ್ಲ. ಆದರೆ ಸರ್ಕಾರದ ಅನುದಾನ, ದಾನಿಗಳ ಸಹಕಾರದಿಂದ ಪೊಲೀಸ್ ಪರೇಡ್ ಮೈದಾನ, ಫೈರಿಂಗ್ ರೇಂಜ್‌ನಂತಹ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು’ ಎಂದು ನಿರ್ಗಮಿತ ಎಸ್ಪಿ ಶ್ರೀಹರಿಬಾಬು ಬಿ.ಎಲ್.ಹೇಳಿದರು.
ಬೆಂಗಳೂರಿನಲ್ಲಿ ಸಿಸಿಬಿ ಡಿಸಿಪಿ ಆಗಿ ವರ್ಗಾವಣೆಗೊಂಡಿರುವ ಅವರಿಗೆ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮ್ಮಿಂದಾದ ಈ ಕೆಲಸದ ಬಗ್ಗೆ ತೃಪ್ತಿ ಇದೆ’ ಎಂದರು.
‘ಜಿಲ್ಲೆಯ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದರಿಂದ ಹೊಸ ಎಸ್ಪಿ ಕಚೇರಿ, ಡಿಎಆರ್ ಕಚೇರಿ ನಿರ್ಮಾಣದ ಕನಸು ನನಸಾಯಿತು. ಡಿಎಆರ್ ವಸತಿ ಸಮುಚ್ಛಯದ ನಿರ್ಮಾಣ ಪ್ರಗತಿಯಲ್ಲಿದೆ. ನಾನು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ಈ ಎಲ್ಲ ಶಾಶ್ವತ ಕೊಡುಗೆಗಳು ನನ್ನ ಅವಧಿಯಲ್ಲಿ ಆಯಿತು ಎಂಬ ಸಂತೃಪ್ತಿ ಭಾವ ನನ್ನಲ್ಲಿದೆ’ ಎಂದು ಹೇಳಿದರು.
‘ಲಕ್ಷಾಂತರ ಜನ ಸೇರುವ ಬೃಹತ್ ಜಾತ್ರೆಗಳ ಜಿಲ್ಲೆ ಇದು. ವರ್ಷಕ್ಕೆ 318ಕ್ಕೂ ಹೆಚ್ಚು ಜಾತ್ರೆಗಳು ಇಲ್ಲಿ ನಡೆಯುತ್ತವೆ. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಖುಷಿ ಇದೆ, ಜತೆಗೆ ಮೂರು ಹಂಪಿ ಉತ್ಸವ, ಜಿ.20 ಶೃಂಗದಂತಹ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಅಭಿಮಾನವೂ ಇದೆ’ ಎಂದು ಶ್ರೀಹರಿಬಾಬು ಹೇಳಿದರು.
‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಇಲಾಖೆಯ ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಮಾತನಾಡಿದರು. ಮೂವರು ಡಿವೈಎಸ್ಪಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.