ADVERTISEMENT

ವಿಜಯನಗರ | 'ಎಸ್‌ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಯತ್ನಿಸಿ'

ಮುಖ್ಯಶಿಕ್ಷಕರ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:19 IST
Last Updated 19 ನವೆಂಬರ್ 2025, 4:19 IST
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಈ ಬಾರಿಯ ಎಸ್‌ಎಸ್ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯದಲ್ಲಿ 10ನೇ ಸ್ಥಾನದೊಳಗಿರಲು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಕ್ರೀಯಾಯೋಜನೆ ಸಿದ್ದಪಡಿಸಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ಇಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ ವರ್ಷ ನಮ್ಮ ಜಿಲ್ಲೆ 18ನೇ ಸ್ಥಾನದಲ್ಲಿತ್ತು, ಅದನ್ನು ಇನ್ನೂ ಉತ್ತಮವಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಫಲಿತಾಂಶ ಸುಧಾರಣೆಗೆ ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಂಕಗಳಿಕೆಗೆ ಉತ್ತೇಜನ ನೀಡಬೇಕು. ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಬೋಧನೆ ಮಾಡಬೇಕು’ ಎಂದರು.

ADVERTISEMENT

ಡಿಡಿಪಿಐ ವೇಂಕಟೇಶ್ ರಾಮಚಂದ್ರಪ್ಪ ಮಾತನಾಡಿ, ‘ಇದೇ ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ದಪಡಿಸಲು ಎಲ್ಲಾ ಶಿಕ್ಷಕರು ಪರಿಶ್ರಮ ವಹಿಸುವ ಮೂಲಕ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಕಾಣಬೇಕಿದೆ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳಿಗೆ ಕ್ವಿಜ್, ಪ್ರಬಂಧ, ಚರ್ಚಾಕೂಟ ಹಾಗೂ ಅಶುಭಾಷಣದ ಮೂಲಕ ಪರೀಕ್ಷೆಗೆ ಸನ್ನದ್ಧಗೊಳಿಸಬೇಕು’ ಎಂದರು.

ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿ, ‘ಈಗಾಗಲೇ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲನಕ್ಷೆಯನ್ನು ನೀಡಲಾಗಿದೆ. ಸರ್ಕಾರದಿಂದ ನೀಡಿರುವ 29 ಅಂಶಗಳ ವರದಿಯನ್ನು ಎಲ್ಲಾ ಶಿಕ್ಷಕರು ಅರಿಯಾಗಿ ಅರ್ಥೈಸಿಕೊಂಡು. ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಪ್ರಗತಿಗೆ ಶಿಕ್ಷಕರು ಸ್ವಹಿತಾಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ’ ಎಂದರು.

ಕೂಡ್ಲಿಗಿ ಬಿಇಒ ಮೈಲೇಶ್ ಬೇವೂರು ಮಾತಮಾಡಿ, ‘ಪ್ರತಿ ದಿನ ನಿಮ್ಮ ಶಾಲೆಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಮೇಲ್ವಿಚಾರಣೆ ನಡೆಸಬೇಕು. ಕಷ್ಟಪಟ್ಟು ಕೆಲಸ ಮಾಡುವುದರ ಬದಲಿಗೆ ಕ್ರಿಯಾಶೀಲ ಕೆಲಸ ಮಾಡಬೇಕಿದೆ’ ಎಂದರು.

ಹಗರಿಬೊಮ್ಮನಹಳ್ಳಿ ಬಿಇಒ ಎಂ.ಎಸ್.ಪ್ರಭಾಕರ್ ಮಾತನಾಡಿದರು. ಹರಪನಹಳ್ಳಿ ಬಿಇಒ ಲೇಪಾಕ್ಷಪ್ಪ, ಹಡಗಲಿ ಬಿಇಒ ಮಹೇಶ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಯತ್ನಟ್ಟಿ ಮಲ್ಲಯ್ಯ, ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಂ.ಹುಲಿಬಂಡಿ, ವಿಷಯ ಪರಿವೀಕ್ಷಕರಾದ ಬಸವಂತಯ್ಯ, ರಾಜಶೇಖರ್, ವಿಶ್ವನಾಥ್ ಸಹಕರಿಸಿದರು.

ಹೊಸಪೇಟೆಯಲ್ಲಿ ಮಂಗಳವಾರ ನಡೆದ ಎಸ್‌ಎಸ್ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತಂತೆ ನಡೆದ ಸಭೆಯಲ್ಲಿ ಪಾಲ್ಗೊಂಡ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು  –ಪ್ರಜಾವಾಣಿ ಚಿತ್ರ

ಶಾಲೆಗಳಲ್ಲಿ ಯಾವುದೇ ತೊಂದರೆಗಳಿದ್ದರೆ ಮುಕ್ತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ. ಫಲಿತಾಂಶದ ವಿಚಾರದಲ್ಲಿ ಮುಖ್ಯಶಿಕ್ಷಕರು ಸೇರಿ ಶಿಕ್ಷಕರು ನಿರ್ಲಕ್ಷ್ಯ ವಹಿಸಿದರೆ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು

- ಕವಿತಾ ಎಸ್‌.ಮನ್ನಿಕೇರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.