ADVERTISEMENT

ಹೊಸಪೇಟೆ: ಮೀಸಲು ಹೆಚ್ಚಿಸಲು ಆಗ್ರಹಿಸಿ ಸಚಿವ ಶ್ರೀರಾಮುಲು ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 10:07 IST
Last Updated 11 ಜುಲೈ 2022, 10:07 IST
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ   

ಹೊಸಪೇಟೆ (ವಿಜಯನಗರ): ಎಸ್ಸಿ/ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ನೂರಾರು ಜನ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಗೇಟ್‌ಗೆ ಬೀಗ ಜಡಿದು, ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಾರಿಗೆ ಸಚಿವರೂ ಆದ ವಾಲ್ಮೀಕಿ ಸಮಾಜದ ಮುಖಂಡ ಬಿ. ಶ್ರೀರಾಮುಲು ವಿರುದ್ಧ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹೋರಾಟದಲ್ಲಿ ಭಾಗವಹಿಸಿ ತಮ್ಮ ಬದ್ಧತೆ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.
ಬೆಳಿಗ್ಗೆ 10ಗಂಟೆಗೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ರಸ್ತೆತಡೆ ಚಳವಳಿ ನಡೆಸಿ,ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನಂತರ ಕಪ್ಪು ಬಾವುಟ ಪ್ರದರ್ಶಿಸುತ್ತ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನೇಕ ಜನ ಪ್ರತಿಭಟನಾಕಾರರು ಕಪ್ಪು ಟೀ ಶರ್ಟ್‌ ಧರಿಸಿದ್ದರು.

11.20ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪುತ್ತಿದ್ದಂತೆ ಘೋಷಣೆಗಳು ಹೆಚ್ಚಾದವು. ಪೊಲೀಸರ ಮನವೊಲಿಕೆಗೂ ಜಗ್ಗದ ಪ್ರತಿಭಟನಾಕಾರರು ಡಿ.ಸಿ ಕಚೇರಿಯ ಮುಖ್ಯ ಗೇಟ್‌ ಬಂದ್‌ ಮಾಡಿ, ಸರಪಳಿ ಹಾಕಿ, ಬೀಗ ಹಾಕಿದರು. ಈ ವೇಳೆ ನೂಕಾಟ, ತಳ್ಳಾರಿ, ವಾಗ್ವಾದವೂ ನಡೆಯಿತು. ಶಾಸಕ ಎಲ್‌.ಬಿ.ಪಿ. ಭೀಮ ನಾಯ್ಕ, ಪ್ರತಿಭಟನಾಕಾರರತ್ತ ಬೀಗದ ಕೈ ತೋರಿಸಿದಾಗ, ಕರತಾಡನ ಮುಗಿಲು ಮುಟ್ಟಿತ್ತು. ಅನಂತರ ಅನೇಕ ಜನ ಮುಖಂಡರು ಮಾತನಾಡಿದರು. ಬಳಿಕ ಎಲ್ಲರನ್ನೂ ಪೊಲೀಸರು ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದು, ಜೀಪು, ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು. ಸಮಯ 12.45 ಆಗಿತ್ತು.
ಶಾಸಕ ಭೀಮ ನಾಯ್ಕ ಮಾತನಾಡಿ, ‘ಎಸ್ಟಿ ಸಮಾಜದ ಮೀಸಲಾತಿ ಶೇ 3ರಿಂದ ಶೇ 7.5ಕ್ಕೆ ಹಾಗೂ ಎಸ್ಸಿ ಸಮಾಜದ ಮೀಸಲು ಪ್ರಮಾಣವನ್ನು ಶೇ 15ರಿಂದ ಶೇ 17ರ ವರೆಗೆ ಹೆಚ್ಚಿಸಬೇಕು ಎನ್ನುವುದು ಹೊಸ ಬೇಡಿಕೆಯಲ್ಲ. ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ 152 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಮುಖಂಡ ರಾಜಶೇಖರ್ ಹಿಟ್ನಾಳ್‌ ಮಾತನಾಡಿ, ಸರ್ಕಾರ ಸೌಲಭ್ಯ ಕೊಟ್ಟರೆ ಉತ್ತಮ. ಇಲ್ಲವಾದರೆ ರಕ್ತ ಕೊಟ್ಟಾದರೂ ಅದನ್ನು ಪಡೆಯುತ್ತೇವೆ. ಮೀಸಲು ಹೆಚ್ಚಿಸಬೇಕು ಎನ್ನುವುದರ‌ ಪರ ಎಲ್ಲ ಜನಾಂಗದವರು ಇದ್ದಾರೆ. ಈ ಹಿಂದೆ ಸರ್ಕಾರ ಕೊಡುತ್ತೇನೆ ಎಂದು ಹೇಳಿ ಈಗ ಹಿಂದೆ ಸರಿದಿರುವುದು ಸರಿಯಲ್ಲ ಎಂದರು.

ಮುಖಂಡ ಎಂ.ಸಿ. ವೀರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿಯೊಂದನ್ನೂ ಖಾಸಗೀಕರಣಗೊಳಿಸುವ ಮೂಲಕ ಪರಿಶಿಷ್ಟರನ್ನು ಮೀಸಲಾತಿಯಿಂದ ವಂಚಿಸುವ ಹುನ್ನಾರ ನಡೆಸುತ್ತಿದೆ. ಅದರ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ. ಇಲ್ಲವಾದಲ್ಲಿ ಎಲ್ಲ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರೋಜಮ್ಮ, ‘ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಬರುವ ದಿನಗಳಲ್ಲಿ‌ ವಿಧಾನಸೌಧಕ್ಕೆ‌ ಬೀಗ ಹಾಕಲಾಗುವುದು. ಕೋಟೆ ಗೋಡೆ ಕಟ್ಟಿದ ಸಮಾಜ ನಮ್ಮದು’ ಎಂದು ಹೇಳಿದರು.

ಮುಖಂಡ ಸೋಮಶೇಖರ್‌ ಬಣ್ಣದಮನೆ ಮಾತನಾಡಿ, ನಮ್ಮ ಹಕ್ಕು ಕೇಳುತ್ತಿದ್ದೇವೆ. ಭಿಕ್ಷೆ ಕೇಳುತ್ತಿಲ್ಲ. ನಮ್ಮ ಪಾಲು ನಮಗೆ ಸಿಗಲೇಬೇಕು. ಕೊಡದಿದ್ದರೆ ಬರುವ ಚುನಾವಣೆಯಲ್ಲಿ ಓಟು ಕೇಳಲು ಬಂದರೆ ಬೂಟಿನೇಟು ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ದುರುಗಪ್ಪ ಪೂಜಾರಿ ಮಾತನಾಡಿ, ಸಮಾಜದ ಬಗ್ಗೆ ಅಭಿಮಾನ, ಗುರುಗಳ ಬಗ್ಗೆ ಗೌರವ ಇಲ್ಲದ ನಮ್ಮ ಸಮಾಜದ ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು. ಸಮಾಜದವರು ಎಲ್ಲ ಪಕ್ಷಗಳ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ನಾಣಿಕೆರೆ ತಿಮ್ಮಯ್ಯ, ಜಂಬಯ್ಯ ನಾಯಕ, ಗುಜ್ಜಲ್ ನಾಗರಾಜ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಸೇರಿದಂತೆ ಹಲವರಿದ್ದರು. ಜಿಲ್ಲೆಯ ವಿವಿಧ ಭಾಗಗಳ ಎಸ್ಸಿ/ಎಸ್ಟಿ ಸಮಾಜದವರು ಪಾಲ್ಗೊಂಡಿದ್ದರು.

---

‘ಖಾತೆ ಬದಲಾದಾಗ ರಾಜೀನಾಮೆ, ಈಗೇಕಿಲ್ಲ?’
‘ಸಚಿವ ಬಿ. ಶ್ರೀರಾಮುಲು ಅವರು ಖಾತೆ ಬದಲಾದಾಗ ರಾಜೀನಾಮೆ ಕೊಡಲು ಮುಂದಾಗುತ್ತಾರೆ. ಆ ಕೆಲಸ ಈಗೇಕಿಲ್ಲ? ಮೀಸಲು ಹೆಚ್ಚಳಕ್ಕಾಗಿಯೂ ರಾಜೀನಾಮೆ ಕೊಡಬೇಕು’ ಎಂದು ಮುಖಂಡ ಗುಜ್ಜಲ್‌ ರಘು ಆಗ್ರಹಿಸಿದರು.

‘ವಾಲ್ಮೀಕಿ ಸಮಾಜದ ಕೆಟಗರಿಯಲ್ಲಿ ಇರುವುದರಿಂದ ಬಿ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅದನ್ನವರು ಅರಿಯಬೇಕು. ನಿಮಗೆ ನಾಚಿಕೆ ಆಗಬೇಕು. 152 ದಿನಗಳಿಂದ ಧರಣಿ ನಡೆಸುತ್ತಿರುವ ಪ್ರಸನ್ನಾನಂದಪುರ ಸ್ವಾಮೀಜಿ ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಸರ್ಕಾರವೇ ಹೊಣೆ. ಶ್ರೀರಾಮುಲು ಅವರು ಎಸ್ಟಿ ಸಮಾಜದ ಎಲ್ಲ ಶಾಸಕರ ಒಂದು ಸಭೆ ನಡೆಸಿ, ಮೀಸಲು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಭೀಮ ನಾಯ್ಕ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಿಸಲಾಗುವುದು. ಅದರ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ಆದರೆ, ಈಗ ಏನಾಗಿದೆ. ಯಡಿಯೂರಪ್ಪ ಕೂಡ ಮಾತಿಗೆ ತಕ್ಕಂತೆ ನಡೆದಿಲ್ಲ ಎಂದರು.

ಬಂಗಾರಿ ಹನುಮಂತು ಮಾತನಾಡಿ, ಎಸ್ಸಿ/ಎಸ್ಟಿ ಕೋಟಾದಡಿ ಗೆದ್ದವರಿಗೆ ನಾಚಿಕೆ ಆಗಬೇಕು. ಅಧಿಕಾರಕ್ಕಾಗಿ ಸಮಾಜ ಬೇಕು. ಮೀಸಲು ಹೆಚ್ಚಿಸಲು ಶ್ರಮಿಸುತ್ತಿಲ್ಲ. ಸಮಾಜದ ಹೆಸರಿನಲ್ಲಿ ಡಿಸಿಎಂ ಹುದ್ದೆ ಕೇಳುತ್ತೀರಿ. ಆದರೆ, ಮೀಸಲು ಹೆಚ್ಚಿಸಲು ಶ್ರಮಿಸುವುದಿಲ್ಲ ಎಂದು ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.