ADVERTISEMENT

ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

36 ತಿಂಗಳ ಫೆಲೋಶಿಪ್‌ ಬಿಡುಗಡೆಗೆ ಸಂಶೋಧನಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 12:16 IST
Last Updated 16 ನವೆಂಬರ್ 2021, 12:16 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಮಹೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಮಹೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: 36 ತಿಂಗಳಿಂದ ಫೆಲೋಶಿಪ್ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.

ನಗರದ ತಹಶೀಲ್ದಾರ್ ಕಚೇರಿಯಿಂದ ಕಾಲ್ನಡಿಗೆ ಜಾಥಾ ಆರಂಭಿಸಿದ ಸಂಶೋಧನಾ ವಿದ್ಯಾರ್ಥಿಗಳು 'ಫೆಲೋಶಿಪ್ ಕೊಡಿ ಇಲ್ಲ, ವಿಷ ಕೊಡಿ' ಎಂದು ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಅಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಮಹೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಕನ್ನಡ ವಿಶ್ವವಿದ್ಯಾಲಯವು ಮೂರು ವರ್ಷಗಳ (36 ತಿಂಗಳು) ಬಾಕಿ ಉಳಿಸಿಕೊಂಡಿದೆ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯ ನಿಯಮದ ಪ್ರಕಾರ, ಆರು ತಿಂಗಳಿಗೊಮ್ಮೆ ನಡೆಯುವ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿ ಸಲ್ಲಿಸುವ ಜೊತೆಗೆ ಅರ್ಧವಾರ್ಷಿಕ ಪ್ರಗತಿ ವರದಿ ಶುಲ್ಕಗಳನ್ನು ಸಂದಾಯ ಮಾಡಿರುತ್ತೇವೆ. ಆದರೂ, ಯಾವುದೇ ಫೆಲೋಶಿಪ್ ಇಲ್ಲದೇ ಗುಣಮಟ್ಟದ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಗೋಳು ತೋಡಿಕೊಂಡರು.

ADVERTISEMENT

‘ಸರ್ಕಾರ ಕಾಲಕಾಲಕ್ಕೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಿಂದ ಹಣವನ್ನು ಬಿಡುಗಡೆ ಮಾಡಿದೆ. ಸಂವಿಧಾನ ಬದ್ಧ ಸಾಮಾಜಿಕ ನ್ಯಾಯದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಹಾಯಧನ ನೀಡಬೇಕಿತ್ತು. ಆದರೆ, ದಲಿತ ವಿದ್ಯಾರ್ಥಿಗಳನ್ನು ಶೋಷಿಸುವ ಮೂಲಕ ನಮ್ಮನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘2018-19ನೇ ಸಾಲಿನಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ಮಾಸಿಕ ಸಹಾಯಧನ ನೀಡಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಆರ್ಥಿಕ ಸಹಾಯಧನವನ್ನು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಡಿಯಲ್ಲಿ ಇಲಾಖೆ ಪೋರ್ಟಲ್ ಮುಖಾಂತರ ನೀಡಬೇಕು’ ಎಂದು ಆಗ್ರಹಿಸಿದರು.

ಸಂಶೋಧನಾ ವಿದ್ಯಾರ್ಥಿಗಳಾದ ದೊಡ್ಡ ಬಸವರಾಜ್, ಮಣಿಕಂಠ, ರಾಜೇಶ್, ಅಭಿಲಾಷ, ರಾಗಿಣಿ, ಮಲ್ಲೇಶ್, ಎಸ್.ಎಫ್.ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜೆ.ಶಿವುಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.