ADVERTISEMENT

ರಂಗಾ ಕೆಮಿಕಲ್ಸ್‌ ವಿಷಯದಲ್ಲಿ ಜಟಾಪಟಿ

ಬಹುಮತ ಆಧರಿಸಿ ಗುತ್ತಿಗೆ ಅವಧಿ ಮುಂದುವರಿಕೆ; ಸ್ಥಾಯಿ ಸಮಿತಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 15:10 IST
Last Updated 9 ಫೆಬ್ರುವರಿ 2022, 15:10 IST
ಹೊಸಪೇಟೆ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷೇತರ ಸದಸ್ಯ ಎಚ್‌.ಎಲ್‌. ಸಂತೋಷ್‌ ಹಾಗೂ ಬಿಜೆಪಿ ಸದಸ್ಯ ರಮೇಶ ಗುಪ್ತಾ ನಡುವೆ ವಾಗ್ವಾದ ನಡೆಯಿತು
ಹೊಸಪೇಟೆ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷೇತರ ಸದಸ್ಯ ಎಚ್‌.ಎಲ್‌. ಸಂತೋಷ್‌ ಹಾಗೂ ಬಿಜೆಪಿ ಸದಸ್ಯ ರಮೇಶ ಗುಪ್ತಾ ನಡುವೆ ವಾಗ್ವಾದ ನಡೆಯಿತು   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆ ನೀರು ಸರಬರಾಜಿನ ಎರಡು ಜಲಶುದ್ಧೀಕರಣ ಘಟಕಗಳ ವಾರ್ಷಿಕ ನಿರ್ವಹಣೆ ಗುತ್ತಿಗೆಯನ್ನು ಟೆಂಡರ್‌ನಲ್ಲಿ ಮಂಜೂರಾದ ದರದಲ್ಲಿ ರಂಗಾ ಕೆಮಿಕಲ್ಸ್‌ ನಿರ್ವಹಿಸುತ್ತಿದ್ದು, ಅದನ್ನೇ ಇನ್ನೊಂದು ವರ್ಷ ಮುಂದುವರೆಸುವ ಪ್ರಸ್ತಾವದ ಬಗ್ಗೆ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.

ಪಕ್ಷೇತರ ಸದಸ್ಯ ಅಬ್ದುಲ್‌ ಖದೀರ್‌, ರಂಗಾ ಕೆಮಿಕಲ್ಸ್‌ ಮುಂದುವರೆಸುವುದು ಬೇಡ. ಹೊಸ ಟೆಂಡರ್‌ ಕರೆಯಬೇಕು. ಕಡಿಮೆ ದರ ನಮೂದಿಸುವವರೆಗೆ ಅದರ ನಿರ್ವಹಣೆ ಜವಾಬ್ದಾರಿ ವಹಿಸಬೇಕು. ನೀರು ಪೂರೈಕೆಗೆ ಅಡ್ಡಿಯಾಗಬಾರದು ಎಂದರು. ಅದಕ್ಕೆ ಎಚ್‌.ಎಲ್‌. ಸಂತೋಷ್‌, ಗುಜ್ಜಲ್‌ ರಘು, ಗೌಸ್‌ ದನಿಗೂಡಿಸಿದರು. ಅದಕ್ಕೆ ಕಾಂಗ್ರೆಸ್‌ನ ರೋಹಿಣಿ ವೆಂಕಟೇಶ, ಬಿಜೆಪಿಯ ತಾರಿಹಳ್ಳಿ ಜಂಬುನಾಥ, ರಮೇಶ ಗುಪ್ತಾ ವಿರೋಧಿಸಿದರು. ರಂಗಾ ಕೆಮಿಕಲ್ಸ್‌ ಅವರನ್ನೇ ಮುಂದುವರೆಸಬೇಕು. ಬಹುಮತದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಆಗ ಮತಕ್ಕೆ ಹಾಕಲಾಯಿತು. 23 ಸದಸ್ಯರು ರಂಗಾ ಕೆಮಿಕಲ್ಸ್‌ ಪರ ಕೈ ಎತ್ತಿ ಬೆಂಬಲ ಸೂಚಿಸಿದ್ದರಿಂದ ಪ್ರಸ್ತಾವ ಅಂಗೀಕರಿಸಲಾಯಿತು.

ಕಾನೂನುಬದ್ಧವಾಗಿಯೇ ರಂಗಾ ಕೆಮಿಕಲ್ಸ್‌ಗೆ ಗುತ್ತಿಗೆ ನೀಡಲಾಗಿದೆ. ನೀರಿನ ಕ್ಲೋರಿನೇಷನ್‌ ಮಾಡದಿದ್ದರೆ ಸಮಸ್ಯೆ ಉಂಟಾಗುತ್ತದೆ. ಸೇವೆ ಸರಿಯಿದ್ದರೆ ಮೂರು ವರ್ಷ ಮುಂದುವರೆಸಬಹುದು. ಅಲ್ಲದೇ ಕಡಿಮೆ ದರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುಮತದ ಆಧಾರದ ಮೇಲೆ ಅವರನ್ನೇ ಮುಂದುವರೆಸಲಾಗುವುದು ಎಂದು ಪೌರಾಯುಕ್ತ ಮನ್ಸೂರ್‌ ಅಲಿ ಘೋಷಿಸಿದರು.

ADVERTISEMENT

ಸ್ಥಾಯಿ ಸಮಿತಿ ರಚನೆ:

ಸಭೆ ಆರಂಭಗೊಳ್ಳುತ್ತಿದ್ದಂತೆ ಸ್ಥಾಯಿ ಸಮಿತಿ ರಚಿಸುವ ಪ್ರಸ್ತಾವ ಓದಲಾಯಿತು. ಅದಕ್ಕೆ ಸದಸ್ಯ ಗುಜ್ಜಲ್‌ ರಘು ಆಕ್ಷೇಪಿಸಿ, ಈ ವಿಷಯ ಮೊದಲೇ ಏಕೆ ತಿಳಿಸಲಿಲ್ಲ ಎಂದರು. ಅದಕ್ಕೆ ಉಪಾಧ್ಯಕ್ಷ ಆನಂದ್‌ ಪ್ರತಿಕ್ರಿಯಿಸಿ, ‘ಈಗಷ್ಟೇ ಈ ಪ್ರಕ್ರಿಯೆ ಆರಂಭಗೊಂಡಿದೆ. ಯಾರು ಬೇಕಾದರೂ ಹೆಸರು ಕೊಡಬಹುದು’ ಎಂದರು. ಬಳಿಕ ನಡೆದ ಸ್ಥಾಯಿ ಸಮಿತಿ ರಚನೆಗೆ ಒಟ್ಟು 11 ಜನ ಉಮೇದುವಾರಿಕೆ ಸಲ್ಲಿಸಿದರು. ಎಲ್ಲವೂ ಸರಿಯಿದ್ದದ್ದರಿಂದ ಸದಸ್ಯರಾಗಿ ನೇಮಕ ಮಾಡಲಾಯಿತು.

ಬಿ. ಜೀವರತ್ನಂ, ಸರವಣನ್‌, ಜಿ.ಎಸ್‌. ಹನುಮಂತಪ್ಪ, ಕಿರಣ್‌ ಎಸ್‌., ಶೇಕ್ಷಾವಲಿ, ಜೆ.ಎಸ್‌. ರಮೇಶ ಗುಪ್ತಾ, ಎಚ್‌.ಕೆ. ಮಂಜುನಾಥ, ಹುಲುಗಪ್ಪ ವಡ್ಡರ್‌, ತಾರಿಹಳ್ಳಿ ಜಂಬುನಾಥ, ಎಚ್‌. ರಾಘವೇಂದ್ರ, ಕೆ. ಗೌಸ್‌ ಸ್ಥಾಯಿ ಸಮಿತಿಗೆ ನೇಮಕಗೊಂಡ ನೂತನ ಸದಸ್ಯರು.

ಸದಸ್ಯರ ನಡುವೆ ವಾಗ್ವಾದ:

‘ಸಭೆಯ ಅಜೆಂಡಾದಲ್ಲಿರುವ ವಿಷಯಗಳ ಬಗ್ಗೆ ಮಾತನಾಡಬೇಕು. ಒಂದುವೇಳೆ ಸಭೆಗೂ ಮುನ್ನ ಅದನ್ನು ಗಮನಕ್ಕೆ ತಂದರೆ ಸೇರಿಸಲಾಗುವುದು. ಆದರೆ, ಸಭೆಯಲ್ಲಿ ಅಜೆಂಡಾ ಬಿಟ್ಟು ಬೇರೆ ವಿಚಾರ ಮಾತಾಡಬಾರದು’ ಎಂದು ಪೌರಾಯುಕ್ತ ಮನ್ಸೂರ್‌ ಅಲಿ ಹೇಳಿದರು.

ಬೇರೊಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಬಿಜೆಪಿ ಸದಸ್ಯ ರಮೇಶ ಗುಪ್ತಾ, ತಮ್ಮ ವಾರ್ಡಿನ ಯುಜಿಡಿ ಸಮಸ್ಯೆ ಕುರಿತು ಮಾತನಾಡಿದರು. ಅದಕ್ಕೆ ಆಕ್ಷೇಪಿಸಿದ ಪಕ್ಷೇತರ ಸದಸ್ಯ ಎಚ್‌.ಎಲ್‌. ಸಂತೋಷ್‌, ‘ಅಜೆಂಡಾದಲ್ಲಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು ಎಂದು ಬೇರೆಯವರಿಗೆ ಹೇಳಿಸುತ್ತೀರಿ. ಆದರೆ, ನೀವೇ ಮಾತಾಡುತ್ತಿದ್ದೀರಲ್ಲ’ ಎಂದರು. ಈ ಮಧ್ಯೆ ಇಬ್ಬರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಕೆಲಹೊತ್ತು ಗೊಂದಲ ಉಂಟಾಯಿತು. ಬಳಿಕ ಪೌರಾಯುಕ್ತ ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.