
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದ ಹೊರವಲಯದ ಜಿಟಿಟಿಸಿ ಕಾಲೇಜ್ ಬಳಿಯ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25ರ ಸ್ವಾಗತ ಕಮಾನು ಹತ್ತಿರ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸರಕು ಸಾಗಣೆಯ ಟಾಟಾ ಏಸ್ ವಾಹನ ಸುಟ್ಟು ಕರಕಲಾಯಿತು.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರ ಗ್ರಾಮದ ಫಕ್ರುದ್ದೀನ್ ಎಂಬುವವರಿಗೆ ಸೇರಿದ ವಾಹನ ಸುಟ್ಟಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಫಕ್ರುದ್ದೀನ್ ಅವರು ಪಟ್ಟಣದಲ್ಲಿ ಈ ವಾಹನವನ್ನು ಬಾಡಿಗೆಗೆ ಓಡಿಸುತ್ತಿದ್ದು, ಸಂಜೆ ವಾಪಸ್ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಪಟ್ಟಣದ ಹೊರವಲಯದಲ್ಲಿ ವಾಹನದ ಡೀಸೆಲ್ ಟ್ಯಾಂಕ್ ಬಳಿಯ ವಯರ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಫಕ್ರುದ್ದೀನ್ ವಾಹನ ನಿಲ್ಲಿಸಿ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನಕ್ಕೆ ತಗುಲಿ ಸುಟ್ಟು ಕರಕಲಾಗಿದೆ. ಬಿಎಂಎಂ ಇಸ್ಪಾತ್‍ನ ತುರ್ತು ಸೇವೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.
ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಘಟನೆಯಿಂದಾಗಿ ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.