ADVERTISEMENT

ವಿಜಯನಗರ: ಸಂಕಷ್ಟದಲ್ಲಿ ಆಸ್ತಿ ತೆರಿಗೆ ಏರಿಕೆ ಅಸಾಂವಿಧಾನಿಕ

​ಪ್ರಜಾವಾಣಿ ವಾರ್ತೆ
Published 31 ಮೇ 2021, 13:33 IST
Last Updated 31 ಮೇ 2021, 13:33 IST
ಸಿಐಟಿಯು ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಐಟಿಯು ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಕೋವಿಡ್–19 ಸಂಕಷ್ಟದಲ್ಲಿ ನಗರಸಭೆಯು ಆಸ್ತಿ ತೆರಿಗೆ ಹೆಚ್ಚಿಸಿ, ಸಾರ್ವಜನಿಕರಿಗೆ ಬರೆ ಎಳೆದಿದೆ. ಇದು ಅಸಾಂವಿಧಾನಿಕ ಕ್ರಮವಾಗಿದೆ ಎಂದು ಸಿಐಟಿಯು ಮತ್ತು ಜನಪರ ವೇದಿಕೆ ಆರೋಪಿಸಿದೆ.

ಈ ಸಂಬಂಧ ಎರಡೂ ಸಂಘಟನೆಗಳ ಮುಖಂಡರು ಸೋಮವಾರ ನಗರದಲ್ಲಿ ಪ್ರತ್ಯೇಕವಾಗಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

‘ನಗರಸಭೆಯ ಚುನಾಯಿತ ಪ್ರತಿನಿಧಿಗಳ ಒಪ್ಪಿಗೆ ಇಲ್ಲದೇ ತೆರಿಗೆ ಹೆಚ್ಚಳಕ್ಕೆ ಕಾನೂನಾತ್ಮಕ ಅಧಿಕಾರ ಇಲ್ಲ, ಸಾರ್ವಜನಿಕರ ಮೇಲೆ ಶೇ 3ರಿಂದ 5ರಷ್ಟು ತೆರಿಗೆ ಹೆಚ್ಚಳಕ್ಕೆ ಅಧಿಕಾರವಿದೆ. ಜನಪ್ರತಿನಿಧಿಗಳು ಇಲ್ಲದಾಗ ನಗರಾಭಿವೃದ್ಧಿ ಕೋಶಕ್ಕೆ ಕಳಿಸಬೇಕು. ಇಷ್ಟೆಲ್ಲ ಕಾನೂನು ಪ್ರಕ್ರಿಯೆ ಇದ್ದರೂ ತೆರಿಗೆ ಹೆಚ್ಚಿಸಿರುವುದು ಕಾನೂನುಬಾಹಿರ. ಕೂಡಲೇ ನಗರಸಭೆ ತನ್ನ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ನಗರಸಭೆಯು ಕಾನೂನು ಬಾಹಿರವಾಗಿ ತೆರಿಗೆ ಹೆಚ್ಚಿಸಿದೆ. ನಗರದ ನಿವಾಸಿಗಳಿಗೆ ಯಾವುದೇ ಸೌಲಭ್ಯವಿಲ್ಲ. ಮೊದಲು ನಗರವಾಸಿಗಳಿಗೆ ಅವಶ್ಯಕ ಸೌಲಭ್ಯ ಒದಗಿಸಬೇಕು. ಕೋವಿಡ್–19 ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ತೆರಿಗೆ ವಿನಾಯತಿ ನೀಡಬೇಕೆ ಹೊರತು ಹೆಚ್ಚಿಸಬಾರದು’ ಎಂದು ಒತ್ತಾಯಿಸಿದ್ದಾರೆ.

ಸಿಐಟಿಯು ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎ. ಕರುಣಾನಿಧಿ, ಭಾಸ್ಕರ್ ರೆಡ್ಡಿ, ಎನ್‌. ಯಲ್ಲಾಲಿಂಗ, ಟಿ.ಮಂಜುನಾಥ, ಜೆ. ಶಿವುಕುಮಾರ, ಜನಪರ ವೇದಿಕೆಯ ಅಧ್ಯಕ್ಷ ಡಿ. ವೆಂಕಟರಮಣ, ಗೌರವ ಅಧ್ಯಕ್ಷ ಜಿ.ವಿ.ರಮೇಶ್, ಪ್ರಧಾನ ಕಾರ್ಯದರ್ಶಿ ಸಿ. ಗೋವಿಂದರಾಜ್, ಸಂಘಟನಾ ಕಾರ್ಯದರ್ಶಿ ವೈ.ರಾಮಚಂದ್ರಬಾಬು, ಯರ್ರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.