ADVERTISEMENT

karnataka Rain: ನಡುಗಡ್ಡೆಗಳಲ್ಲಿ ಸಿಲುಕಿದ ಜನ, ಜಾನುವಾರು

ಲಿಂಗಸುಗೂರು ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಪ್ರವಾಹ* ಬೆಳಗಾವಿ ಜಿಲ್ಲೆಯ ಕೆಲವೆಡೆ ಶಾಲಾ– ಕಾಲೇಜುಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 23:52 IST
Last Updated 23 ಜುಲೈ 2024, 23:52 IST
ಹಂಪಿಯ ತುಂಗಭದ್ರಾ ನದಿಯ ನೀರಲ್ಲಿ ಅರ್ಧದಷ್ಟು ಮುಳುಗಿರುವ ಪುರಂದರ ಮಂಟಪ 
–ಪ್ರಜಾವಾಣಿ ಚಿತ್ರ
ಹಂಪಿಯ ತುಂಗಭದ್ರಾ ನದಿಯ ನೀರಲ್ಲಿ ಅರ್ಧದಷ್ಟು ಮುಳುಗಿರುವ ಪುರಂದರ ಮಂಟಪ  –ಪ್ರಜಾವಾಣಿ ಚಿತ್ರ   

ಲಿಂಗಸುಗೂರು (ರಾಯಚೂರು ಜಿಲ್ಲೆ)/ ಹೊಸಪೇಟೆ (ವಿಜಯನಗರ): ರಾಜ್ಯದ ವಿವಿಧೆಡೆ ಮಂಗಳವಾರವೂ ಮಳೆ ಮುಂದುವರಿದಿದೆ. ಕೆಲವೆಡೆ ಬಿರುಸು ಕಡಿಮೆಯಾಗಿದೆ. ಕೆಲ ದಿನಗಳಿಂದ ಸುರಿದ ಸತತ ಮಳೆ ಕಾರಣ ಕೃಷ್ಣಾ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. 

‘ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ, ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 24ರಂದು ರಜೆ ನೀಡಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳಿಗೂ ರಜೆ ಇರುತ್ತದೆ’ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಕೃಷ್ಣಾ ನದಿಯ ಪ್ರವಾಹ ಹೆಚ್ಚಾಗಿದ್ದು, ಮೂರು ನಡುಗಡ್ಡೆ ಪ್ರದೇಶಗಳಲ್ಲಿ 24 ಜನರು ಸಿಲುಕಿಕೊಂಡಿದ್ದಾರೆ.

ADVERTISEMENT

ನಾರಾಯಣಪುರದ ಬಸವಸಾಗರ ಜಲಾಶಯದಿಂದ 1.43 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಗಳು ಭಾಗಶಃ ಜಲಾವೃತಗೊಂಡು, ಬಾಹ್ಯ ಸಂಪರ್ಕ ಕಳೆದುಕೊಂಡಿವೆ.

ಕರಕಲಗಡ್ಡಿಯಲ್ಲಿ 5, ಮ್ಯಾದರಗಡ್ಡಿಯಲ್ಲಿ 15, ವಂಕಮ್ಮನಗಡ್ಡಿ 4 ಜಾನುವಾರುಗಳು ಸಿಲುಕಿವೆ. ನದಿಯಲ್ಲಿ ನೀರು ಬರಲು ಆರಂಭಿಸುತ್ತಿದ್ದಂತೆಯೇ ಕೆಲವರು ಮುನ್ನೆಚ್ಚರಿಕಾ ಕ್ರಮವಾಗಿ ನಡುಗಡ್ಡೆ ತೊರೆದು ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ಪರ್ಯಾಯ ಆಸರೆ ಇಲ್ಲದವರು ನಡುಗಡ್ಡೆಳಲ್ಲೇ ಉಳಿದುಕೊಂಡಿದ್ದಾರೆ.

‘ಸಂತ್ರಸ್ತರ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅವರ ಅನುಕೂಲಕ್ಕಾಗಿ ಕಾಳಜಿ ಕೇಂದ್ರಗಳನ್ನು ತೆರೆದಿಲ್ಲ. ಹೀಗಾಗಿ ಕೆಲ ಕುಟುಂಬಗಳು ನಡುಗಡ್ಡೆಗಳಲ್ಲೇ ಉಳಿದುಕೊಂಡಿವೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ಸಾಧ್ಯವಿರುವ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ ತಿಳಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟೆಯಿಂದ ಮೂರು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ನದಿಗೆ ಹರಿಯುತ್ತಿರುವ ಕಾರಣ ಹಂಪಿ ಸಮೀಪ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆ ಆಗಿದೆ. ಇದರಿಂದ ಪುರಂದರ ಮಂಟಪ ಅರ್ಧ ಮುಳುಗಿದೆ.

ವಿರೂಪಾಕ್ಷ ದೇವಸ್ಥಾನ ಬಳಿ ತುಂಗಭದ್ರಾ ಸ್ನಾನಘಟ್ಟದಲ್ಲಿರುವ ಯಜ್ಞೋಪವೀತ ಮಂಟಪ ಬಹುತೇಕ ಮುಳುಗಿದೆ. ಸದ್ಯ ಎಲ್ಲೂ ಪ್ರವಾಹದ ಆತಂಕ ಇಲ್ಲ. ಕಳೆದ ವರ್ಷ ಅಣೆಕಟ್ಟೆ ತುಂಬದೆ ಇದ್ದ ಕಾರಣ ನೀರು ನದಿಗೆ ಹರಿದಿರಲಿಲ್ಲ.

ಮಲೆನಾಡಿನಲ್ಲಿ ಮಳೆ ಬಿರುಸು ಸ್ವಲ್ಪ ತಗ್ಗಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣ 85,148 ಕ್ಯುಸೆಕ್‌ಗೆ ಇಳಿಕೆ ಆಗಿದೆ. ಹೊರಹರಿವಿನ ಪ್ರಮಾಣ 15,159 ಕ್ಯುಸೆಕ್‌ ಇದೆ. 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 1,629.84 ಅಡಿ ನೀರಿನ ಮಟ್ಟ ಇದ್ದು, ಭರ್ತಿಯಾಗಲು ಇನ್ನು ಮೂರು ಅಡಿ ಬಾಕಿಯಿದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 93.46 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 

ಸೇತುವೆಗಳು ಮುಳುಗಡೆ (ಬೆಳಗಾವಿ ವರದಿ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಳುಗಡೆಯಾದ ಸೇತುವೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ, ಘಟಪ್ರಭಾ ನದಿಗೆ ಅಡ್ಡಲಾದ ಮೂಡಲಗಿ ತಾಲ್ಲೂಕಿನ ಢವಳೇಶ್ವರ ಸೇತುವೆ ಮತ್ತು ದೂಧಗಂಗಾ ನದಿಗೆ ಅಡ್ಡಲಾದ ಸದಲಗಾ–ಬೋರಗಾಂವ ಸೇತುವೆ ಮಂಗಳವಾರ ಮುಳುಗಿವೆ.

ಕುಡಚಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಮೀರಜ್‌, ಸಾಂಗ್ಲಿಯ ಆಸ್ಪತ್ರೆಗಳಿಗೆ ಹೋಗಲು ಕುಡಚಿ ಸೇತುವೆ ಅವಲಂಬಿಸಿದ್ದಾರೆ. ಈಗ ಅದು ಮುಳುಗಿದ್ದರಿಂದ ಜನರಿಗೆ ತೊಂದರೆಯಾಗಿದ್ದು, ಅಂಕಲಿ ಮಾರ್ಗವಾಗಿ ಹೋಗುತ್ತಿದ್ದಾರೆ.

ಢವಳೇಶ್ವರ ಸೇತುವೆ ಮುಳುಗಿದ್ದರಿಂದ ಅವರಾದಿ, ಯರಗುದ್ರಿ, ವೆಂಕಟಾಪುರ, ಅರಳಿಮಟ್ಟಿ, ತಿಮ್ಮಾಪುರ ಗ್ರಾಮಗಳ ಜನರಿಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗ‍ಪುರಕ್ಕೆ ಸಂಚಾರ ಪೂರ್ಣ ಸ್ಥಗಿತಗೊಂಡಿದೆ. 7 ಕಿ.ಮೀ. ಅಂತರದಲ್ಲಿರುವ ಮಹಾಲಿಂಗಪುರಕ್ಕೆ ಈಗ 50 ಕಿ.ಮೀ. ಸುತ್ತು ಬಳಿಸಿ ಸಂಚರಿಸಬೇಕಿದೆ.

ಕೃಷ್ಣೆಯಲ್ಲಿ ಒಳಹರಿವು ಹೆಚ್ಚಳ:

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಸೋಮವಾರ 1,21,993 ಕ್ಯುಸೆಕ್‌ ಒಳಹರಿವು ಇತ್ತು. ಮಂಗಳವಾರ ರಾಜಾಪುರ ಬ್ಯಾರೇಜ್‌ನಿಂದ 1,20,125 ಕ್ಯುಸೆಕ್‌, ದೂಧಗಂಗಾ ನದಿಯಿಂದ 30,970 ಕ್ಯುಸೆಕ್‌ ಸೇರಿ 1,51,095 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ ತಾಲ್ಲೂಕು ವ್ಯಾಪ್ತಿಯ ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕಬ್ಬು, ಸೋಯಾಬೀನ್‌ ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ರೈತರು ಆತಂಕಗೊಂಡಿದ್ದಾರೆ. 

‘ಕೃಷ್ಣಾ ಮತ್ತು ಅದರ ಉಪನದಿಗಳ ಪ್ರವಾಹ ನಿರ್ವಹಣೆಗೆ ಮುನ್ನೆಚ್ಚರಿಕೆ ವಹಿಸಬೇಕಿದೆ. ನಿಪ್ಪಾಣಿ ತಾಲ್ಲೂಕಿನ ಭಾರವಾಡದ 25 ಮನೆಗಳನ್ನು ಖಾಲಿ ಮಾಡಿಸಿ, ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದುವರಿದ ಮಳೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯ ಸೋಮವಾರಪೇಟೆ ಭಾಗದಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ಘಟ್ಟಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು 5,871 ಕ್ಯುಸೆಕ್‌ನಿಂದ 17,160 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಬಿರುಗಾಳಿ ಬೀಸುತ್ತಿದ್ದು, ಒಟ್ಟು 95 ವಿದ್ಯುತ್ ಕಂಬಗಳು ಬಿದ್ದು, 6 ಮನೆಗಳಿಗೆ ಹಾನಿಯಾಗಿದೆ. 

ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿಯಿತು.

ಮಂಗಳೂರು ತಾಲ್ಲೂಕಿನಲ್ಲಿ ನಾಲ್ಕು ಹಾಗೂ ಬಂಟ್ವಾಳ ತಾಲ್ಲೂಕುಗಳಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.  ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಟ್ಯಾರು ಎಂಬಲ್ಲಿ  ಮರದ ಕೊಂಬೆ ಬಿದ್ದು ಪ್ರಯಾಣಿಕರ ತಂಗುದಾಣ ಹಾನಿಗೊಳಗಾಗಿದೆ.

ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ನುಗ್ಗುತ್ತಿದೆ. ಸುಮಾರು 992 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬೆಳೆ ಜಲಾವೃತವಾಗಿದೆ. ಹಾವೇರಿ, ಹಾನಗಲ್ ಮತ್ತು ಸವಣೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ನದಿ ದಡದ 110 ಗ್ರಾಮಗಳಿಗೆ ನೀರು ನುಗ್ಗುತ್ತಿದ್ದು, ಪ್ರವಾಹ ಭೀತಿ ಶುರುವಾಗಿದೆ.

ಹಂಪಿಯ ತುಂಗಭದ್ರಾ ನದಿಯ ನೀರಲ್ಲಿ ಅರ್ಧದಷ್ಟು ಮುಳುಗಿರುವ ಪುರಂದರ ಮಂಟಪ  –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.