ADVERTISEMENT

ಸಾಧನಾ ಸಮಾವೇಶ ಬಹಿಷ್ಕಾರ ಎಚ್ಚರಿಕೆ

ಮಾದಿಗ ಸಮುದಾಯ ಅವಹೇಳನ ಆರೋಪ–ಭೀಮಾ ನಾಯ್ಕ್ ಕ್ಷಮೆಗೆ ಪಟ್ಟು

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:21 IST
Last Updated 15 ಮೇ 2025, 16:21 IST
ಭೀಮಾ ನಾಯ್ಕ್‌
ಭೀಮಾ ನಾಯ್ಕ್‌   

ಹೊಸಪೇಟೆ (ವಿಜಯನಗರ): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶಕ್ಕೆ ನಗರ ಸಜ್ಜಾಗಿರುವಂತೆಯೇ, ಜಿಲ್ಲೆಯ ಮಾದಿಗ ಸಮುದಾಯದವರು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ನೀಡಿದ್ದಾರೆ ಎನ್ನಲಾದ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾದಿಗ ಸಮುದಾಯದ ನಾಯಕ ಸೋಮಶೇಖರ್ ಅವರ ಮಗನ ಮದುವೆಗೆ ಹೋಗಿದ್ದು ಏಕೆ ಎಂದು ಭೀಮಾ ನಾಯ್ಕ್  ಪ್ರಶ್ನಿಸಿ ಮಾದಿಗ ಸಮುದಾಯಕ್ಕೆ ಅವಮಾನಿಸಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳಬೇಕು, ಇಲ್ಲದಿದ್ದರೆ, ಸಾಧನಾ ಸಮಾವೇಶದ ವೇದಿಕೆ ಏರಲು ಅವಕಾಶ  ನೀಡುವುದಿಲ್ಲ, ನಾವು ಸಮಾವೇಶ ಬಹಿಷ್ಕರಿಸುತ್ತೇವೆ. ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ಜಿಲ್ಲಾ ಮಾದಿಗ ಮಹಾಸಭಾದ ಮುಖಂಡ ಎಂ.ಸಿ.ವೀರಸ್ವಾಮಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ಆರೋಪವನ್ನು ನಿರಾಕರಿಸಿದ ಭೀಮಾ ನಾಯ್ಕ್‌, ‘ನಾನು ಕಮಲಾಪುರದಲ್ಲಿ ನಡೆದ ಮದುವೆಗೆ ಹೋಗಿಯೇ ಇಲ್ಲ. ಸೋಮಶೇಖರ್ ಯಾವ ಸಮುದಾಯಕ್ಕೆ ಸೇರಿದವರು ಎಂಬುದು ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಮಾಡುತ್ತಿದ್ದಾರೆ’ ಎಂದರು.

ADVERTISEMENT
ಮಾದಿಗ ಸಮುದಾಯವನ್ನು ನಾನು ದೂಷಿಸಿಲ್ಲ. ನಾನು ಯಾರ ಕ್ಷಮೆಯನ್ನೂ ಕೇಳಲ್ಲ ನಾನು ಸಾಧನಾ ಸಮಾವೇಶಕ್ಕೆ ಬಂದೇ ಬರುತ್ತೇನೆ
ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷ
ನಾನು ಮಾದಿಗರನ್ನು ಭೀಮಾ ನಾಯ್ಕ್ ವಿರುದ್ಧ ಎತ್ತಿಕಟ್ಟುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ನನಗಿಲ್ಲ. ಮುಸ್ಲಿಮನಾಗಿರುವ ನನ್ನ ಮಾತನ್ನು ಮಾದಿಗ ಸಮುದಾಯದವರು ಕೇಳುತ್ತಾರೆಯೇ?
ಸಿರಾಜ್‌ ಶೇಖ್‌ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಒಗ್ಗಟ್ಟು ಪ್ರದರ್ಶಿಸುವ ಹಂತದಲ್ಲೇ ಬಿಕ್ಕಟ್ಟು

ವಿಜಯನಗರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಬಣಗಳಿದ್ದು ಒಬ್ಬರನ್ನೊಬ್ಬರು ಕಾಲೆಳೆಯುವ ಕೆಲಸ ನಡೆಯುತ್ತಲೇ ಇದೆ. ಸಾಧನಾ ಸಮಾವೇಶ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಕಳೆದ ಕೆಲವು ದಿನಗಳಿಂದ ಕಾಣಿಸಿತ್ತು. ಆದರೆ ಮತ್ತೆ ಬಿಕ್ಕಟ್ಟು ತಲೆದೋರಿದೆ.  ‘ನನ್ನ ಜಿಲ್ಲಾ ಅಧ್ಯಕ್ಷ ಸ್ಥಾನ ಹೋಗುತ್ತದೆ ಎಂದು ಹೇಳಲು ಭೀಮಾ ನಾಯ್ಕ್ ಯಾರು? ತಮ್ಮ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಮಾದಿಗರಿಗಾಗಿ ಒಂದಿಷ್ಟೂ ಕೆಲಸ ಮಾಡದ ಕಾರಣ ಭೀಮಾ ನಾಯ್ಕ್ ಕಳೆದ ಬಾರಿ ಸೋತಿದ್ದಾರೆ ಇದೀಗ ಮಾದಿಗರನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಮಾದಿಗ ಸಮುದಾಯದವರ ಜನಸಂಖ್ಯೆ 4 ಲಕ್ಷದಷ್ಟಿದೆ. ಅವರ ಒಲವು ಏನಿದ್ದರೂ ಕಾಂಗ್ರೆಸ್‌ನತ್ತ. ಹೀಗಿರುವಾಗ ಆ ಸಮುದಾಯದ ವಿರೋಧ ಕಟ್ಟಿಕೊಂಡು ಸಾಧನಾ ಸಮಾವೇಶ ಮಾಡುವುದು ಸುಲಭವಲ್ಲ ಬಿಕ್ಕಟ್ಟು ಶಮನಕ್ಕೆ ಯತ್ನಿಸುವೆ’ ಎಂದು ಸಿರಾಜ್ ಶೇಖ್ ಹೇಳಿದರು.

ಸಿಎಂ, ಡಿಸಿಎಂ ನಾಳೆ ನಗರಕ್ಕೆ

ಸಾಧನಾ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ನಗರಕ್ಕೆ ಅಗಮಿಸಲಿದ್ದಾರೆ. ಈ ಭಾಗದಲ್ಲಿ ಒಂದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಬಿರುಸಿನ ಗಾಳಿ ಮಳೆ ಸುರಿದರೆ ಪೆಂಡಾಲ್‌ ನಿರ್ಮಾಣಕ್ಕೆ ಮಾತ್ರವಲ್ಲ ಅದರ ದೃಢತೆಗೆ ಧಕ್ಕೆ ಒದಗಬಹುದು ಎಂಬ ಆತಂಕ ನೆಲೆಸಿದೆ. ಸಿಎಂ ಭೇಟಿಗೆ ಆಕ್ಷೇಪ: ಈ ಮೊದಲಿನ ಪ್ರವಾಸ ಕಾರ್ಯಕ್ರಮದಂತೆ ಸಿಎಂ ಅವರು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಅವರ ಮನೆಗೆ ಹೋಗುವುದಿದೆ. ಮಾದಿಗರನ್ನು ಅವಮಾನಿಸಿರುವ ಅವರ ಮನೆಗೆ ಸಿಎಂ ಹೋಗಬಾರದು ಎಂದು ಮಾದಿಗ ಮಹಾಸಭಾದ ವೀರಸ್ವಾಮಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.