ADVERTISEMENT

ಸಿರಿಗೆರೆ-ಉಜ್ಜಯಿನಿ ಪೀಠದ ಭಕ್ತರ ನಡುವೆ ಜಗಳ: 20 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 17:33 IST
Last Updated 28 ಜನವರಿ 2023, 17:33 IST
   

ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕಾಳಾಪುರದಲ್ಲಿ ಉಜ್ಜಯಿನಿ ಪೀಠದ ಭಕ್ತರು ಹಾಗೂ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಕಾನ್‌ಸ್ಟೆಬಲ್‌ ಸೇರಿದಂತೆ 20 ಮಂದಿ ಶನಿವಾರ ಗಾಯಗೊಂಡಿದ್ದಾರೆ.

ಕಾನ್‌ಸ್ಟೆಬಲ್‌ ಲಿಂಗಯ್ಯ ಹಾಗೂ ಇಬ್ಬರು ಮಹಿಳೆಯರೂ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದವರನ್ನು ಬಂದು ಹೊಡೆದಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

ಕೊಟ್ಟೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ನಿಮಿತ್ತ ಸಿರಿಗೆರೆ ಮಠದ ಭಕ್ತರು ಸಿರಿಗೆರೆಯಿಂದ ಕೊಟ್ಟೂರು ವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಬೈಕ್ ರ‍್ಯಾಲಿಯಲ್ಲಿ ಕೆಲ ದುಷ್ಕರ್ಮಿಗಳು ಕಾಳಾಪುರ ಗ್ರಾಮಕ್ಕೆ ಬರುತ್ತಲೇ ಗ್ರಾಮಸ್ಥರ ಮನೆ ಮೇಲೆ ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸಿರಿಗೆರೆ ಮಠದ ಭಕ್ತರು ಹಮ್ಮಿಕೊಂಡ ಬೈಕ್ ರ‍್ಯಾಲಿ ಕಾಳಾಪುರ ಪ್ರವೇಶ ಮಾಡಿದಾಗ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡವರು ಹಾಗೂ ಕಾಳಾಪುರ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಸಿಟ್ಟಿಗಾದ ಬೈಕ್ ರ‍್ಯಾಲಿಯಲ್ಲಿ ಬಂದವರು ದಾಳಿ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳಿಗೆ ಹಾನಿ ಉಂಟು ಮಾಡಿದ್ದಾರೆ. ಮನೆಯ ಬಾಗಿಲು, ಕಿಟಕಿ ಮುರಿದು ಹಾಕಿದ್ದಾರೆ.

ಘಟನೆಗೆ ಕಾರಣವೇನು?: ಉಜ್ಜಯಿನಿಯ ಮರುಳಸಿದ್ದೇಶ್ವರ ದೇವಸ್ಥಾನ ಸಾಧು ಸದ್ಧರ್ಮ ಜನಾಂಗದ ಆರಾಧ್ಯ ದೈವವಾಗಿದೆ. ಉಜ್ಜಿನಿಯಲ್ಲಿರುವ ದೇವಸ್ಥಾನ ಸಾಧು ಸದ್ಧರ್ಮ ಜನಾಂಗಕ್ಕೆ ಸೇರಬೇಕು ಎಂಬ ಹೋರಾಟ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈಗ ಕೊಟ್ಟೂರಿನಲ್ಲಿಯೇ ತರಳಬಾಳು ಹುಣ್ಣಿಮೆ ಮಹೋತ್ಸವ ಹಮ್ಮಿಕೊಂಡಿರುವುದರಿಂದ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಕಾಳಾಪುರದಲ್ಲಿ ಮರುಳ ಸಿದ್ದೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಒಂಬತ್ತು ಪಾದುಕೆಗಳಿವೆ. ಭರತ ಹುಣ್ಣಿಮೆ ವೇಳೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಇಲ್ಲಿ ‌ಪೂಜಾ ವಿಧಿ ವಿಧಾನ ನಡೆಯುತ್ತಿವೆ. ಇದೇ ಕಾರಣಕ್ಕೆ ಕೆಲವರು ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

9 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಘಟನೆ ಸಂಭವಿಸಿದ ನಂತರ ತಹಶೀಲ್ದಾರ್ ಎಂ. ಕುಮಾರಸ್ವಾಮಿ ಅವರು ಮುಂಜಾಗ್ರತಾ ಕ್ರಮವಾಗಿ ಕೊಟ್ಟೂರು, ಉಜ್ಜಿನಿ ಸೇರಿದಂತೆ ಒಂಬತ್ತು ಗ್ರಾಮಗಳಲ್ಲಿ ಜ.28ರಿಂದ ಫೆ. 5ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಜರುಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೊಟ್ಟೂರು ಪಟ್ಟಣ, ಉಜ್ಜಿನಿ ಗ್ರಾಮ ಹಾಗೂ ಉಜ್ಜಯಿನಿ ಮಠದ ವ್ಯಾಪ್ತಿಯ 9 ಗ್ರಾಮಗಳಲ್ಲಿ ಜನರು ಗುಂಪುಗೂಡಿ ಮೆರವಣಿಗೆ ಮಾಡುವುದು, ಬಹಿರಂಗ ಘೋಷಣೆ, ವಾದ್ಯ ಬಾರಿಸುವುದನ್ನು ನಿಷೇಧಿಸಲಾಗಿದೆ. ದೈಹಿಕ ಹಿಂಸೆ ಉಂಟು ಮಾಡುವ ಮಾರಕಾಸ್ತ್ರಗಳನ್ನು ಒಯ್ಯುವುದು, ಸ್ಫೋಟಕ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.