
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಸಲುವಾಗಿ ಕಾಲುವೆಗಳಿಗೆ ನೀರು ಹರಿಸುವುದನ್ನು ಆರು ತಿಂಗಳು ಬಂದ್ ಮಾಡಲಾಗುತ್ತಿದ್ದು, ಇದೇ ಅವಧಿಯಲ್ಲಿ ಎಡದಂಡೆ ಕಾಲುವೆಗಳಲ್ಲಿನ ದುರಸ್ತಿ ಕೆಲಸಗಳನ್ನು ನಡೆಸುವ ನಿಟ್ಟಿನಲ್ಲಿ ತಜ್ಞರ ತಂಡ ಮಂಗಳವಾರದಿಂದ ಪರಿಶೀಲನೆ ಆರಂಭಿಸಿದೆ.
ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಉಪಸಮಿತಿಯ ಅಧ್ಯಕ್ಷ ಹಾಗೂ ಸರ್ಕಾರದ ನಿವೃತ್ತ ಕಾರ್ಯದರ್ಶಿ ಜಿ.ಟಿ.ಚಂದ್ರಶೇಖರಪ್ಪ ಅವರ ನೇತೃತ್ವದಲ್ಲಿ ಒಂಭತ್ತು ಮಂದಿಯ ತಂಡ ಮಂಗಳವಾರ ಬೆಳಿಗ್ಗೆ ಇಲ್ಲಿನ ವೈಕುಂಠ ಅತಿಥಿಗೃಹದಿಂದ ಪ್ರಯಾಣ ಆರಂಭಿಸಿತು. ಕೊಪ್ಪಳ ಜಿಲ್ಲೆಯ ಹಿಟ್ನಾಳ್, ಗಂಗಾವತಿ ತಾಲ್ಲೂಕಿನ ಪಾಪಯ್ಯ ಸುರಂಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ತಂಡ ಎರಡು ದಿನ ಪ್ರವಾಸ ಕೈಗೊಂಡು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ತಂಡದ ಜತೆಗೆ ಬಂದಿರುವ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಯೋಜನೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ, 6.30 ಲಕ್ಷ ಎಕರೆಗೆ ನೀರುಣಿಸುವ, 241 ಕಿ.ಮೀ.ಉದ್ದದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿನ ಹಲವು ದೋಷಗಳನ್ನು ಸರಿಪಡಿಸುವ, ದುರಸ್ತಿ ಕೆಲಸ ಮಾಡುವ ಅವಕಾಶ ಇದೀಗ ಒದಗಿದೆ. ಇದಕ್ಕಾಗಿ ಈಗಾಗಲೇ ₹430 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ತಜ್ಞರು ವರದಿ ಸಲ್ಲಿಸಿದ ಬಳಿಕ ಸಂಪುಟದಲ್ಲಿ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ನಾವು ₹1000 ಕೋಟಿ ಒದಗಿಸಲು ಮನವಿ ಮಾಡಿದ್ದೇವೆ. ಇದರಿಂದ ಕಾಲುವೆಯಲ್ಲಿನ ಹಲವು ಕೆಲಸಗಳನ್ನು ಶಾಶ್ವತವಾಗಿ ನಿರ್ವಹಿಸುವುದು ಸಾಧ್ಯವಾಗಲಿದೆ ಎಂದರು.
ಪಾಪಯ್ಯ ಸುರಂಗ ಮಾರ್ಗ ಒಂದು ಕಿ.ಮೀ.ನಷ್ಟು ಉದ್ದ ಇದೆ. ಸದ್ಯ ಅದರಲ್ಲಿ 4,200 ಕ್ಯೂಸೆಕ್‌ನಷ್ಟು ಪ್ರಮಾಣದಲ್ಲಿ ಮಾತ್ರ ನೀರು ಹರಿಯುತ್ತಿದೆ. ಅದನ್ನು ಅಗಲಗೊಳಿಸಿದರೆ 5 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಎಡದಂಡೆಯ ಕೊನೆಯ ಭಾಗಕ್ಕೂ ನೀರು ಸರಾಗವಾಗಿ ಹರಿಯುವುದು ಸಾಧ್ಯವಾಗಲಿದೆ. ಈ ಸುರಂಗ ಕಾಲುವೆ ಅಗಲಗೊಳಿಸಲು ಕನಿಷ್ಠ ₹100 ಕೋಟಿ ಅಗತ್ಯ ಬೀಳಬಹುದು, ಹಟ್ಟಿ ಚಿನ್ನದ ಗಣಿಯ ಸುರಂಗ ತಜ್ಞರನ್ನೇ ಅದಕ್ಕಾಗಿ ಕರೆಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅವಧಿಯೊಳಗೆ ಗೇಟ್ ಸಿದ್ಧ: ವಿಶ್ವಾಸ
ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಗೇಟ್‌ಗಳನ್ನು ಮುಂದಿನ ಮೇ ಒಳಗೆ ಅಳವಡಿಸುವ ವಿಶ್ವಾಸ ಇದೆ. ಈಗಾಗಲೇ ರಾಜ್ಯ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿದೆ. ಸದ್ಯ ಗೇಟ್‌ಗಳ ನಿರ್ಮಾಣ ಹಳೆ ಗೇಟ್‌ಗಳಿಗೆ ಕತ್ತರಿ ಹಾಕಿ ತೆಗೆಯುತ್ತಿರುವ ಪ್ರಕ್ರಿಯೆ ಗಮನಿಸಿದರೆ ಎಲ್ಲವೂ ಯೋಜನೆಯ ಪ್ರಕಾರವೇ ನಡೆಯುವ ವಿಶ್ವಾಸ ಇದೆ ಎಂದು ಶಾಸಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.