ADVERTISEMENT

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಪೂರ್ಣ

1.65 ಲಕ್ಷ ಕ್ಯುಸೆಕ್‌ಗೆ ಹೆಚ್ಚಾದ ತುಂಗಭದ್ರಾ ಒಳಹರಿವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 16:12 IST
Last Updated 17 ಜುಲೈ 2022, 16:12 IST
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ   

ಹೊಸಪೇಟೆ (ವಿಜಯನಗರ): ‘ಇಲ್ಲಿನ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ತಿಳಿಸಿದ್ದಾರೆ.

ಕ್ರಸ್ಟ್‌ಗೇಟ್‌ ನಂಬರ್‌ 21ರ ‘ರ್‍ಯಾಡಿಕನ್‌’ ಗಿಯರ್‌ ಬಾಕ್ಸ್‌ಗೆ ಹಾನಿಯಾಗಿತ್ತು. ತಕ್ಷಣವೇ ಅದರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಹತ್ತು ದಿನದೊಳಗೆ ಪೂರ್ಣಗೊಂಡಿದೆ. ತುರ್ತು ಪರಿಸ್ಥಿತಿ ಎದುರಾದರೆ 21ನೇ ಕ್ರಸ್ಟ್‌ಗೇಟ್‌ನಿಂದಲೂ ನೀರು ಹರಿಸಬಹುದು.

ಜಲಾಶಯಕ್ಕೆ ಒಟ್ಟು 33 ಕ್ರಸ್ಟ್‌ಗೇಟ್‌ಗಳಿದ್ದು, ಇನ್ನುಳಿದ 32 ಕ್ರಸ್ಟ್‌ಗೇಟ್‌ಗಳು ಉತ್ತಮ ಸ್ಥಿತಿಯಲ್ಲಿದ್ದು, 6.50 ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿಸಬಹುದು ಎಂದು ಭಾನುವಾರ ತಿಳಿಸಿದ್ದಾರೆ.

ADVERTISEMENT

ಡ್ಯಾಂ ನಿರ್ಮಾಣವಾದ ನಂತರ ಈ ರೀತಿ ತಾಂತ್ರಿಕ ದೋಷ ಕಂಡು ಬಂದಿದ್ದು ಇದೇ ಮೊದಲು. 1992ರಲ್ಲಿ 3.69 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿತ್ತು. ಈಗ ಕೂಡ ನೀರು ಹರಿಸುವ ಸ್ಥಿತಿಯಲ್ಲಿ ಜಲಾಶಯ ಇದೆ ಎಂದು ತಿಳಿಸಿದ್ದಾರೆ.

ಮೂರು ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ದೋಷವಿದೆ. ಎರಡರಲ್ಲಿ ಸಣ್ಣ ಪ್ರಮಾಣದ ತಾಂತ್ರಿಕ ತೊಂದರೆ ಇದ್ದು, ಒಂದಕ್ಕೆ ಹೆಚ್ಚಿನ ಹಾನಿಯಾಗಿತ್ತು. ಇದರಿಂದಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಎಂಜಿನಿಯರ್‌ಗಳು ಶನಿವಾರ ತಿಳಿಸಿದ್ದರು.

1.65 ಲಕ್ಷ ಕ್ಯುಸೆಕ್‌ ಒಳಹರಿವು:
ತುಂಗಭದ್ರಾ ಜಲಾಶಯದ ಒಳಹರಿವು ಭಾನುವಾರ 1.65 ಲಕ್ಷ ಕ್ಯುಸೆಕ್‌ಗೆ ಹೆಚ್ಚಾಗಿದ್ದು, ನದಿ ತೀರದ ಗ್ರಾಮಗಳ ನೂರಾರು ಎಕರೆ ಬೆಳೆ ಜಲಾವೃತವಾಗಿದೆ.

ಶನಿವಾರ 1.49 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ತುಂಗಾ ಮತ್ತು ಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ನದಿಯಲ್ಲಿ ಸತತ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಈಗಾಗಲೇ ಹಂಪಿಯ ಸ್ನಾನಘಟ್ಟ, ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನ, ಕರ್ಮ ಮಂಟಪ, ಪುರಂದರದಾಸರ ಮಂಟಪ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಅವುಗಳು ಎಷ್ಟೂ ಗೋಚರಿಸುತ್ತಿಲ್ಲ. ನದಿ ತೀರದಲ್ಲಿ ಪೊಲೀಸರು, ಪ್ರವಾಸಿ ಮಿತ್ರರು ಹಾಗೂ ಗೃಹರಕ್ಷಕ ದಳದವರನ್ನು ನಿಯೋಜಿಸಲಾಗಿದ್ದು, ಪ್ರವಾಸಿಗರನ್ನು ಹೋಗಲು ಬಿಡುತ್ತಿಲ್ಲ. ದೂರದಲ್ಲೇ ನಿಂತು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 96.191 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ನಿತ್ಯ ಸರಾಸರಿ 12 ಟಿಎಂಸಿ ಅಡಿ ನೀರು ಹರಿದು ಬರುತ್ತಿರುವುದರಿಂದ ಹೆಚ್ಚುವರಿ ನೀರನ್ನು ನೇರ ನದಿಗೆ ಹರಿಸಲಾಗುತ್ತಿದೆ. ಶನಿವಾರ 95.086 ಟಿಎಂಸಿ ಅಡಿ, ಶುಕ್ರವಾರ 94.857 ಟಿಎಂಸಿ ಅಡಿ, ಗುರುವಾರ 97.677 ಟಿಎಂಸಿ ಅಡಿ, ಬುಧವಾರ 99.898 ಟಿಎಂಸಿ ಅಡಿ, ಮಂಗಳವಾರ 97.906 ಟಿಎಂಸಿ ಅಡಿ, ಸೋಮವಾರ 91.014 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಉತ್ತಮ ಮಳೆ:ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಸುರಿಯುತ್ತಿದ್ದ ತುಂತುರು ಮಳೆ, ಭಾನುವಾರ ಜೋರಾಗಿ ಸುರಿಯಿತು. ಮಧ್ಯಾಹ್ನ ಆರಂಭಗೊಂಡ ಬಿರುಸಿನ ಮಳೆ ಸಂಜೆಯ ವರೆಗೆ ಎಡೆಬಿಡದೇ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.