ADVERTISEMENT

ತುಂಗಭದ್ರಾ ಅಣೆಕಟ್ಟೆ: ಎಲ್ಲ ಕ್ರೆಸ್ಟ್‌ಗೇಟ್‌ ಕಾಲಮಿತಿಯಲ್ಲಿ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 12:37 IST
Last Updated 8 ಸೆಪ್ಟೆಂಬರ್ 2025, 12:37 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಕ್ರೆಸ್ಟ್‌ಗೇಟ್‌ಗಳನ್ನು ಕಾಲಮಿತಿಯಲ್ಲಿ ಅಳವಡಿಸಬೇಕು, ರೈತರ ಬೆಳೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ಸೋಮವಾರ ಇಲ್ಲಿನ ತುಂಗಭದ್ರಾ ಮಂಡಳಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ವೆಂಕಟಪ್ಪ ನಾಯಕ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಮುಖಂಡರಾದ ವೀರಸಂಗಯ್ಯ, ಬಡೆಲಡಕು ನಾಗೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಕೃಷಿ ಸಂಬಂಧಿತ ಉದ್ಯಮಗಳನ್ನು ನಂಬಿದ ಕೆಲಸಗಾರರ ಹಿತ ಕಾಯುವ  ಕೆಲಸ ಆದ್ಯತೆಯ  ಮೇಲೆ ಆಗಬೇಕು ಎಂದು ಒತ್ತಾಯಿಸಿದರು.

‘ಸದ್ಯ 15 ಗೇಟ್ ಸಿದ್ಧವಾಗಿದೆ ಎಂದು ತುಂಗಭದ್ರಾ ಮಂಡಳಿ ಹೇಳುತ್ತಿದೆ, ನೀರಿನ ಪ್ರಮಾಣ ಕಡಮೆಯಾದ ಬಳಿಕ ಗೇಟ್ ಅಳವಡಿಕೆ ಆರಂಭವಾಗಿ ಜೂನ್‌ ಒಳಗೆ ಮುಗಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಸರ್ಕಾರ ದುಡ್ಡು ಒದಗಿಸಿದರೆ ಮಾತ್ರ ಕೆಲಸ ವೇಗವಾಗಿ ಸಾಗಲು ಸಾಧ್ಯ, ಯಾವುದೇ ಕಾರಣಕ್ಕೂ ರೈತರ ಹಿತ ಬಲಿ ಕೊಡುವ ಕೆಲಸವಾಗಬಾರದು, ತಕ್ಷಣ ಎಲ್ಲ ಕೆಲಸಗಳಿಗೆ ವೇಗ ಸಿಗಬೇಕು ಎಂಬ ಕಾರಣಕ್ಕೆ ಪಕ್ಷಾತೀತವಾಗಿ ಈ ಹೋರಾಟ ನಡೆಸಾಗಿದೆ’ ಎಂದು ಚಾಮರಸ ಮಾಲಿಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಒಂದು ಬೆಳೆಗೂ ನಷ್ಟ ಆಗಬಾರದು: ತುಂಗಭದ್ರಾ ಕಾಲುವೆ ನೀರನ್ನು ನಂಬಿದ ರೈತರು, ಈ ರೈತರನ್ನು ನಂಬಿದ ರೈಸ್‌ಮಿಲ್ ಉದ್ಯಮ, ಟ್ರಾಕ್ಟರ್‌ನವರು.. ಹೀಗೆ ಲಕ್ಷಾಂತರ ಮಂದಿ ತುಂಗಭದ್ರಾ ನದಿ ನೀರನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಗಳು ತಕ್ಷಣ ಇದರ ಬಗ್ಗೆ ಗಮನ ಹರಿಸಬೇಕು. ಈ ಬಾರಿ ಉತ್ತಮ ಮಳೆಯಾಗಿದೆ. ಕ್ರೆಸ್ಟ್‌ಗೇಟ್‌ ಸಲುವಾಗಿ ಒಂದು ಬೆಳೆಗೂ ನೀರಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದು ಪ್ರತಿಭಟನೆ ವೇಳೆ ಒಕ್ಕೊರಲ ಒತ್ತಾಯ ಮಾಡಲಾಯಿತು.

ಕೊನೆಯಲ್ಲಿ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. 

ರೈತರ ಹಕ್ಕೊತ್ತಾಯಗಳು

  • ಯಾವುದೇ ಬೇಸಿಗೆ ಬೆಳೆಗೆ ತೊಂದರೆಯಾಗದಂತೆ ನೀರು ಪೂರೈಸಿ, ಕ್ರೆಸ್ಟ್‌ಗೇಟ್‌ಗಳನ್ನು ಕಾಲಮಿತಿಯಲ್ಲಿ ಅಳವಡಿಸಬೇಕು.

  • ನವಲಿ ಜಲಾಶಯದ ಕುರಿತು ಕೇವಲ ಆಶ್ವಾಸನೆ ಬೇಡ, ಅನುಷ್ಠಾನ ಬೇಕು.

  • ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿನ ನೂರಾರು ಎಂಜಿನಿಯರ್ ಹುದ್ದೆ ತುಂಬಬೇಕು.

  • ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ 1.5 ಲಕ್ಷ ಎಕರೆಗೆ ಅನಧಿಕೃತವಾಗಿ ನೀರಾವರಿ ಆಗುತ್ತಿದ್ದು, ಇದರಿಂದ ಮಾನವಿ, ಸಿರಿವಾರ, ರಾಯಚೂರು ತಾಲ್ಲೂಕುಗಳಿಗೆ ನೀರು ತಲುಪುತ್ತಿಲ್ಲ, ತಕ್ಷಣ ಇದಕ್ಕೆ ಕಡಿವಾಣ ಹಾಕಿ.

  • ನೀರು ಕಳವಿಗೆ 2 ವರ್ಷ ಜೈಲು, ₹2 ಲಕ್ಷ ದಂಡ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ.

  • ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ರೈತರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಿ.

  • ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಯಲ್ಲಿ ಆಗಿರುವ ಭಾರಿ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.