ADVERTISEMENT

ವಿಜಯನಗರ | ತುಂಗಭದ್ರಾ ಜಲಾಶಯ: ಹೂಳೆತ್ತಲು ನಯಾ ಪೈಸೆಯೂ ಇಲ್ಲ

ಕೇಂದ್ರ, ರಾಜ್ಯಗಳ ನಿರ್ಲಿಪ್ತ ಧೋರಣೆ ಸಚಿವರ ಉತ್ತರದಿಂದ ಬಹಿರಂಗ

ಎಂ.ಜಿ.ಬಾಲಕೃಷ್ಣ
Published 26 ಜುಲೈ 2025, 22:30 IST
Last Updated 26 ಜುಲೈ 2025, 22:30 IST
ತುಂಗಭದ್ರಾ ಅಣೆಕಟ್ಟೆಯ ಸಮೀಪದಲ್ಲೇ ಬೇಸಿಗೆ ಕಾಲದಲ್ಲಿ ಕಾಣಿಸುವ ಹೂಳು  –ಪ್ರಜಾವಾಣಿ ಚಿತ್ರ
ತುಂಗಭದ್ರಾ ಅಣೆಕಟ್ಟೆಯ ಸಮೀಪದಲ್ಲೇ ಬೇಸಿಗೆ ಕಾಲದಲ್ಲಿ ಕಾಣಿಸುವ ಹೂಳು  –ಪ್ರಜಾವಾಣಿ ಚಿತ್ರ   

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಪ್ರತಿವರ್ಷ ಅರ್ಧ ಟಿಎಂಸಿ ಅಡಿಯಷ್ಟು ಹೂಳು ಬಂದು ಸೇರುತ್ತಿದೆ ಎಂಬ ಆತಂಕಕಾರಿ ವಿದ್ಯಮಾನದ ನಡುವೆಯೇ, ಈ ಹೂಳಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಆಸಕ್ತಿ ಇಲ್ಲ, ಕೇಂದ್ರ ದುಡ್ಡನ್ನೇ ಇಟ್ಟಿಲ್ಲ ಎಂಬ ಅಂಶ ಲೋಕಸಭೆಯಲ್ಲಿ ಸಚಿವರು ನೀಡಿದ ಉತ್ತರದಿಂದ ಗೊತ್ತಾಗಿದೆ.

ರಾಯಚೂರು ಸಂಸದ ಜಿ.ಕುಮಾರ ನಾಯಕ್‌ ಅವರು ತುಂಗಭದ್ರಾ ಜಲಾಶಯದ ಹೂಳು, ಅಣೆಕಟ್ಟೆಯ  ಹಾಗೂ ಇತರ ಜಲಮೂಲಗಳ ಪುನರುಜ್ಜೀವನ, ಜಲಮೂಲ ಹೆಚ್ಚಳ ಕುರಿತಂತೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಗುರುವಾರ ಲಿಖಿತ ಉತ್ತರ ನೀಡಿರುವ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್‌ ಭೂಷಣ್‌ ಚೌಧರಿ ಈ ಮಾಹಿತಿ ನೀಡಿದ್ದಾರೆ.

‘ತುಂಗಭದ್ರಾ ಅಣೆಕಟ್ಟೆಯ ನಾಗರಿಕ ನಿರ್ಮಾಣಗಳ ಪುನರುಜ್ಜೀವನ ಕೆಲಸವನ್ನು ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವದಲ್ಲಿ ತುಂಗಭದ್ರಾ ಜಲಾಶಯದ ಹೂಳೆತ್ತುವುದಕ್ಕೆ ಯಾವುದೇ ಬೇಡಿಕೆಯೂ ಇಲ್ಲ. ಸಲ್ಲಿಸಲಾದ ಪ್ರಸ್ತಾವಗಳಲ್ಲಿ ಗ್ರೌಟಿಂಗ್, ಪಾಯಿಂಟಿಂಗ್‌ನಂತಹ ನೀರು ಸೋರಿಕೆ ತಡೆ ಕ್ರಮಗಳು, ಅಣೆಕಟ್ಟೆಯ ಕೆಳಭಾಗದ ಒಡ್ಡುಗಳ ಪುನರುತ್ಥಾನ, ಜಲವಿದ್ಯುತ್ ಪ್ರಸರಣ ಜಾಲ ಸುಧಾರಣೆ ಕ್ರಮಗಳು ಮತ್ತು ಅಣೆಕಟ್ಟೆಯಲ್ಲಿನ ಕೆಲವು ಉಪಕರಣಗಳ ಕಾಮಗಾರಿಗಳ ಕುರಿತಂತೆ ಮಾತ್ರ ಇದೆ. ತುಂಗಭದ್ರಾ ಅಣೆಕಟ್ಟೆಯ ಎಡಭಾಗ ಕರ್ನಾಟಕ ರಾಜ್ಯದ ಸುಪರ್ದಿಗೆ ಒಳಪಟ್ಟಿದ್ದು, ಅಲ್ಲಿನ ಪುನರುಜ್ಜೀವನ ಕೆಲಸಗಳಿಗಾಗಿ ಉದ್ದೇಶಿತ ₹41.55 ಕೋಟಿ ಬದಲಿಗೆ ₹34.60 ಕೋಟಿ ವ್ಯಯಿಸಲಾಗಿದೆ’ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಸಿಂಚಾಯಿಯಲ್ಲೂ ರಾಜ್ಯಕ್ಕಿಲ್ಲ ಪಾಲು: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನಾ (ಪಿಎಂಕೆಎಸ್‌ವೈ) ಅಡಿಯಲ್ಲಿ ಹರ್‌ ಖೇತ್‌ ಕೋ ಪಾನಿ (ಎಚ್‌ಕೆಕೆಪಿ) ಯೋಜನೆ ಜಲಮೂಲಗಳ ಹೂಳೆತ್ತುವಿಕೆ, ಜಲಮೂಲ ಬಲಪಡಿಸಲು ಇರುವ ದುರಸ್ತಿ, ನವೀಕರಣ ಮತ್ತು ಪುನರ್‌ಸ್ಥಾಪನೆ (ಆರ್‌ಆರ್‌ಆರ್‌) ಕೆಲಸವಾಗಿದೆ. 2016–17ರಿಂದ 2025ರ ಮಾರ್ಚ್ ವರೆಗೆ ₹545.35 ಕೋಟಿಯನ್ನು ಕೇಂದ್ರ ನೀಡಿದೆ. ಆದರೆ ರಾಜ್ಯಕ್ಕೆ ಇಲ್ಲಿ ನಯಾ ಪೈಸೆಯೂ ಸಿಕ್ಕಿಲ್ಲದಿರುವುದು ಸಚಿವರು ಬಿಡುಗಡೆ ಮಾಡಿರುವ ಪಟ್ಟಿಯಿಂದ ಗೊತ್ತಾಗಿದೆ. ಇಲ್ಲಿ ತಮಿಳುನಾಡಿಗೆ ₹146 ಕೋಟಿ, ಒಡಿಶಾಕ್ಕೆ ₹151 ಕೋಟಿ, ರಾಜಸ್ಥಾನಕ್ಕೆ ₹82 ಕೋಟಿ, ಬಿಹಾರಕ್ಕೆ ₹41 ಕೋಟಿ ನೀಡಿರುವ ಉಲ್ಲೇಖ ಇದೆ. 

ಪಿಎಂಕೆಎಸ್‌ವೈ ಯೋಜನೆಯಡಿಯಲ್ಲಿ 1.20 ಲಕ್ಷ ಹೆಕ್ಟೇರ್‌ ಕೃಷಿಭೂಮಿಯನ್ನು ನೀರಾವರಿಗೆ ಒಳಪಡಿಸಲಾಗಿದೆ. 191 ದಶಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಜಲಸಂಗ್ರಹ ಸಾಮರ್ಥ್ಯವನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರ ಲಾಭ ಕರ್ನಾಟಕಕ್ಕೆ ಆಗಿಲ್ಲ ಎಂಬುದನ್ನು ಅವರ ಉತ್ತರವೇ ಬೊಟ್ಟುಮಾಡಿ ತೋರಿಸಿದೆ.

ಬಿ.ಗೋಣಿಬಸಪ್ಪ
ರೈತರ ಹಿತ ಕಾಪಾಡಲು ಎರಡೂ ಸರ್ಕಾರಗಳು ವಿಫಲವಾಗಿರುವುದು ಬೇಸರದ ಸಂಗತಿ. ಜನರೇ ಸ್ವಯಂಪ್ರೇರಿತವಾಗಿ ಹೂಳು ತೆಗೆಯುವುದು ಸಾಧ್ಯವಿದೆ ಅದಕ್ಕಾದರೂ ಅವಕಾಶ ಕಲ್ಪಿಸಿಕೊಡಿ
ಬಿ. ಗೋಣಿಬಸಪ್ಪ ರೈತ ಮುಖಂಡ ಹೊಸಪೇಟೆ

ಅಣೆಕಟ್ಟೆ ನಿರ್ವಹಣೆಗೆ ಸಾಲದ ದುಡ್ಡೇ ಗತಿ ದೇಶದಲ್ಲಿರುವ ಅಣೆಕಟ್ಟೆಗಳ ಪುನರುತ್ಥಾನ ಮತ್ತು ಸುಧಾರಣಾ ಕಾರ್ಯಕ್ರಮಗಳಿಗೆ (ಡಿಆರ್‌ಐಪಿ) ಆಂತರಿಕ ಸಂಪನ್ಮೂಲದ ಬದಲಿಗೆ ಹೊರಗಿನಿಂದ ಸಾಲ ತಂದು ವಿನಿಯೋಗಿಸಲಾಗುವುದು. ವಿಶ್ವಬ್ಯಾಂಕ್‌ ಮತ್ತು ಏಷ್ಯಾ ಮೂಲಸೌಲಭ್ಯ ಹೂಡಿಕೆ ಬ್ಯಾಂಕ್‌ಗಳಿಂದ ಸಾಲ ಪಡೆದು 2031ರೊಳಗೆ ಕೆಲಸ ಪೂರ್ಣಗೊಳಿಸಲಾಗುವುದು. 2 ಮತ್ತು 3ನೇ ಹಂತದಲ್ಲಿ ಈ ಕಾಮಗಾರಿಗಳು ನಡೆಯಲಿದ್ದು ಅಣೆಕಟ್ಟೆಗಳನ್ನು ಬಲಪಡಿಸುವುದು ಮತ್ತು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು ಯೋಜನೆಯ ಉದ್ದೇಶ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.  ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಈ ಯೋಜನೆ ಅಡಿಯಲ್ಲಿ 2ನೇ ಹಂತದಲ್ಲಿ ₹308 ಕೋಟಿ ಹಾಗೂ 3ನೇ ಹಂತದಲ್ಲಿ ₹304 ಕೋಟಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಎರಡೂ ಹಂತಗಳು ಸೇರಿ ಒಟ್ಟು ₹10.211 ಕೋಟಿಯನ್ನು 21 ರಾಜ್ಯಗಳು ಹಾಗೂ ಕೇಂದ್ರ ಜಲಶಕ್ತಿ ಆಯೋಗಕ್ಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. 

133 ಟಿಎಂಸಿ ಅಡಿ–ತುಂಗಭದ್ರಾ ಜಲಾಶಯದ ಮೂಲ ನೀರು ಸಂಗ್ರಹ ಸಾಮರ್ಥ್ಯ 28 ಟಿಎಂಸಿ ಅಡಿ– 70 ವರ್ಷದಲ್ಲಿ ತುಂಬಿರುವ ಹೂಳು 105.78 ಟಿಎಂಸಿ ಅಡಿ– ಸದ್ಯ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.