ಹಗರಿಬೊಮ್ಮನಹಳ್ಳಿ: ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮಕ್ಕೆ ಕಳೆದ ವರ್ಷದಂತೆ ಈ ಬಾರಿಯೂ ಸರಿಯಾದ ಸಮಯಕ್ಕೆ ತುಂಗಭದ್ರೆ ಹರಿಯುತ್ತಿದ್ದಾಳೆ. ತಾಲ್ಲೂಕಿನ ಅಸ್ಮಿತೆಯಾಗಿರುವ ಪಕ್ಷಿಧಾಮವಾಗಿಸಿದ ಕೆರೆಯನ್ನು ಭರ್ತಿ ಮಾಡುವ ಮಳೆ ಈ ಬಾರಿ ಸುರಿದಿಲ್ಲ, ಈಗ ಅನಿವಾರ್ಯವಾಗಿ ತುಂಗಭದ್ರೆ ಆಪತ್ಕಾಲದಲ್ಲಿ ಸಕಾಲದಲ್ಲಿ ನೆರವಾಗಿದ್ದಾಳೆ.
ಪಕ್ಷಿಧಾಮಕ್ಕೆ ಅಗತ್ಯ ನೀರು ಹರಿಯದಿದ್ದರೆ ಇಲ್ಲಿನ ಜೀವವೈವಿಧ್ಯದ ಸೌಂದರ್ಯಕ್ಕೆ ಮಂಕು ಕವಿದಂತಾಗುತ್ತದೆ. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಪಕ್ಷಿಧಾಮಕ್ಕೆ ನೀರು ಹರಿಸುವ ಏತನೀರಾವರಿ ಘಟಕವೊಂದನ್ನು ಪ್ರತ್ಯೇಕವಾಗಿ ಆರಂಭಿಸಲಾಗಿದೆ. ಸತತ 12 ಗಂಟೆಗಳ ಕಾಲ 100 ಎಚ್‍ಪಿ ಸಾಮರ್ಥ್ಯದ ಸೆಂಟ್ರಿಫ್ಯೂಗಲ್ ಪಂಪ್ ಮತ್ತು ಮೋಟರ್ ಯಂತ್ರಗಳಿಂದ ನಿರಂತರ ನೀರು ಪೂರೈಕೆ ಆಗುತ್ತಿದೆ. ಇದರಿಂದಾಗಿ ಅಂಕಸಮುದ್ರ ಪಕ್ಷಿಧಾಮದಲ್ಲಿ ಜಲಧಾರೆ ಹರಿಯುತ್ತಿದೆ.
2022ರಲ್ಲಿ ಕೆರೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿತ್ತು, ಜತೆಗೆ ನೀರು ಹರಿಸುವ ಯೋಜನೆಗೂ ಚಾಲನೆ ದೊರೆತಿತ್ತು, ಆಗ ಪಕ್ಷಿಧಾಮ ಸತತ ಮೂರು ತಿಂಗಳು ದ್ವೀಪದಂತಾಗಿತ್ತು, ಪಕ್ಷಿ ಪ್ರಿಯರು ಬಾನಾಡಿಗಳ ಕಲರವವವನ್ನು ಕಣ್ತುಂಬಿಕೊಳ್ಳುವುದಕ್ಕೂ ಸಾಧ್ಯವಾಗಿರಲಿಲ್ಲ.
ಕಳೆದ ವರ್ಷ ಕೆರೆ ಸಂಪೂರ್ಣ ಭರ್ತಿಯಾಗಿದ್ದರೂ ನೀರು ಸ್ಥಗಿತಗೊಳಿಸುವ ಕುರಿತಂತೆ ಹಲವು ಪ್ರಹಸನಗಳು ನಡೆದಿದ್ದವು. ಸ್ಥಳೀಯ ಕೆಲವು ರೈತರು ಮತ್ತು ಇಲಾಖೆಯ ಎಂಜಿನಿಯರ್‌ಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮಧ್ಯೆ ವಾಕ್ಸಮರವಾಗಿತ್ತು. ರಸ್ತೆಗಳೆಲ್ಲಾ ಮುಚ್ಚಿಹೋಗಿ ವೀಕ್ಷಣಾ ಗೋಪುರಕ್ಕೆ ತೆರಳುವುದಕ್ಕೆ ಸಾಧ್ಯವಾಗಿರಲಿಲ್ಲ.
ಈ ಬಾರಿ ಬಾನಾಡಿಗಳ ಜೀವವೈವಿಧ್ಯಕ್ಕೆ ಪೂರಕವಾಗುವಂತೆ ಅಗತ್ಯ ಇರುವಷ್ಟು ಮಾತ್ರ ನೀರು ಹರಿಸುವಂತೆ ಅನೇಕ ಪಕ್ಷಿಪ್ರೇಮಿಗಳು ಒತ್ತಾಯಿಸಿದ್ದಾರೆ.
ಪಕ್ಷಿಧಾಮದಲ್ಲಿನ ನೀರು ಖಾಲಿಯಾಗಬೇಕು ಮತ್ತೆ ಸಂಪೂರ್ಣ ಭರ್ತಿಯಾಗಬೇಕು ಇಲ್ಲಿನ ಪಕ್ಷಿಗಳ ಬದುಕಿಗೆ ಇದು ಅಗತ್ಯ ಆಗ ಮಾತ್ರ ಜೀವವೈವಿದ್ಯತೆ ಪರಿಪೂರ್ಣವಾದಂತಾಗುತ್ತದೆ- ಇಟ್ಟಿಗಿ ವಿಜಯ್‍ಕುಮಾರ್ ಪರಿಸರ ತಜ್ಞ
ನಾಲ್ಕು ವರ್ಷದ ಹಿಂದೆ ಆರಂಭ
2021ರಲ್ಲಿ ₹1 ಕೋಟಿ ಅಂದಾಜು ಮೊತ್ತದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ಪಕ್ಷಿಧಾಮಕ್ಕಾಗಿ ಪ್ರತ್ಯೇಕವಾಗಿ ಏತ ನೀರಾವರಿ ಯೋಜನೆ ಕಾರ್ಯಾರಂಭಗೊಂಡಿತ್ತು ಸತತವಾಗಿ ನೀರು ಹರಿದಿತ್ತು. ಕೆರೆ ಭರ್ತಿಯಾಗಿ ಕೋಡಿ ಬೀಳುವುದಕ್ಕೆ ಸತತವಾಗಿ ಮೂರು ತಿಂಗಳು ನೀರು ಹರಿಯಬೇಕು ಎನ್ನುತ್ತಾರೆ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಂಜಿನಿಯರ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.