ADVERTISEMENT

ಅಪಾಯದಿಂದ ಪಾರಾಗಲು ಲಸಿಕೆ ಸಹಕಾರಿ: ಬಿ.ಜಿ. ಕನಕೇಶಮೂರ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 11:15 IST
Last Updated 3 ಜುಲೈ 2021, 11:15 IST
ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಲಸಿಕಾ ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಲಸಿಕೆ ಪಡೆದರು
ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಲಸಿಕಾ ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಲಸಿಕೆ ಪಡೆದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 200 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಯಿತು.

ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು, ಶಿಸ್ತಿನಿಂದ ಸಾಲಿನಲ್ಲಿ ನಿಂತುಕೊಂಡು ಲಸಿಕೆ ಪಡೆದರು. ಇದಕ್ಕೂ ಮುನ್ನ ನಡೆದ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ‘ಕೋವಿಡ್–19 ಅಪಾಯದಿಂದ ಪಾರಾಗಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಲಸಿಕೆ ಸಹಕಾರಿ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಲಸಿಕೆ ಪಡೆಯುವುದು ಕಡ್ಡಾಯಗೊಳಿಸಿದೆ, ಆಫ್‌ಲೈನ್‌ನಲ್ಲಿ ಪರೀಕ್ಷೆಗಳು ಈ ತಿಂಗಳಲ್ಲಿ ಆರಂಭವಾಗಲಿದೆ. ಲಸಿಕೆ ಪಡೆಯದಿದ್ದರೆ ಭೌತಿಕವಾಗಿ ಕಾಲೇಜು ಆರಂಭಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಲಸಿಕಾಕರಣ ಕಾರ್ಯಕರ್ಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳಿಗೆ ಈ ಹಿಂದೆಯೇ ಲಸಿಕೆ ಪಡೆಯಲು ಸೂಚಿಸಲಾಗಿತ್ತು. ಕಾಲೇಜಿನಿಂದ ನಡೆಸಿದ ಆನ್‌ಲೈನ್ ಸಮೀಕ್ಷೆಯ ಪ್ರಕಾರ ಶೇ. 40ರಷ್ಟು ವಿದ್ಯಾರ್ಥಿಗಳು ಈಗಾಗಲೇ ಲಸಿಕೆ ಪಡೆದಿದ್ದಾರೆ. ಇಂದು 200 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆ ಪಡೆಯದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೂ ಲಸಿಕೆ ನೀಡಲಾಗುತ್ತದೆ’ ಎಂದರು.

ಆರೋಗ್ಯ ಇಲಾಖೆಯ ಡಾ.ನಾಗೇಂದ್ರ ಮಾತನಾಡಿ, ‘ವಿದ್ಯಾರ್ಥಿಗಳು ವದಂತಿಗೆ ಕಿವಿಗೊಡದೇ ನಿರ್ಭೀತಿಯಿಂದ ಲಸಿಕೆ ಪಡೆಯಬೇಕು. ತಮ್ಮ ಸಹಪಾಠಿಗಳಿಗೂ ಲಸಿಕೆ ಪಡೆಯಲು ಉತ್ತೇಜಿಸಬೇಕು’ ಎಂದು ತಿಳಿಸಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಂಚಾಲಕ ಟಿ.ಎಚ್.ಬಸವರಾಜ್, ಉಪನ್ಯಾಸಕರಾದ ಮಂಜುನಾಥ್, ಗಡಿಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.