ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಪ್ರಯುಕ್ತ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ನಡೆದ ಶನಿವಾರ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಸಿನಿಮಾ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಅವರ ಗಾಯನ ವೈಭವ ಜನರನ್ನು ರಂಜಿಸಿತು.
‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಚಿತ್ರದ ಪ್ರಸಿದ್ಧ ಗೀತೆ 'ಅರೆ ಅರೇ ರೇ ಅವಳ ನಗುವ' ಹಾಡಿನ ಮೂಲಕ ವಾಸುಕಿ ವೈಭವ್ ತಮ್ಮ ಗಾಯನ ಆರಂಭಿಸಿದರು. ನಂತರ ಪ್ರಸಿದ್ಧಿ ರಂಗಗೀತೆ ‘ಮೈಸೂರು ರಾಜ್ಯದ ದೊರೆಯೇ' ಪ್ರಸ್ತುತ ಪಡಿಸಿದರು. ಜನಪದ ಸೊಗಡಿನ 'ಸಾವಿರ ಶರಣವ್ವ ಕರಿಮಾಯಿ ತಾಯಿ' ಗೀತೆಯನ್ನು ಸಹಚರರೊಂದಿಗೆ ಹಾಡಿ ಜನರಿಂದ ಮೆಚ್ಚುಗೆ ಗಳಿಸಿದರು.
ರಾತ್ರಿಯ ಹಿತವಾದ ಚಳಿಯಲ್ಲಿ 'ಮುಂದಿನ ನಿಲ್ದಾಣ' ಚಿತ್ರದ 'ಇನ್ನೂ ಬೇಕಾಗಿದೆ' ಗೀತೆ ಸಭಿಕರಿಗೆ ಬೆಚ್ಚಗಿನ ಅನುಭವ ನೀಡಿತು. ಕಿರಿಕ್ ಪಾರ್ಟಿ ಚಿತ್ರದ 'ಕಾಗಗದ ದೋಣಿಯಲಿ' ಎಂಬ ಗೀತೆ ಭಗ್ನ ಪ್ರೇಮಿಗಳ ಕಣ್ಣಂಚಿನಲ್ಲಿ ನೀರು ತರಿಸಿತು. ಪುನೀತ್ ರಾಜ್ ಕುಮಾರ್ ಹಾಡಿದ 'ಕಾಣದಂತೆ ಮಾಯವಾದನು' ಹಾಡನ್ನು ವಾಸುಕಿ ವೈಭವ್ ಪ್ರಸ್ತುತ ಪಡಿಸಿದರು. ಬಡವ ರಾಸ್ಕಲ್ ಸಿನಿಮಾದ ಶೀರ್ಷಿಕೆ ಗೀತೆ ಹಾಗೂ ಆಲ್ಬಮ್ ಗೀತೆ ‘ಮನಸ್ಸಿನಿಂದ ಯಾರೂ ಕೆಟ್ಟವರಲ್ಲ’ ಗೀತೆ ಪ್ರಸ್ತುತ ಪಡಿಸಿದರು.
ಸೇರಿದ್ದ ಲಕ್ಷಾಂತರ ಪ್ರೇಕ್ಷಕರಿಂದ ಉತ್ತೇಜಿತರಾದ ವಾಸುಕಿ ವೈಭವ್ ಅವರು ತಮ್ಮೊಂದಿಗೆ ಸಭಿಕರು ಸಹ ಹಾಡಲು ಉತ್ತೇಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.