ADVERTISEMENT

ಕುಲಪತಿ– ಹಣಕಾಸು ಅಧಿಕಾರಿ ತದ್ವಿರುದ್ಧ ಹೇಳಿಕೆ

ಹಂಪಿ ಕನ್ನಡ ವಿ.ವಿ ಗುತ್ತಿಗೆ ಆಧಾರಿತ ಸಿಬ್ಬಂದಿಯ ವೇತನ ಬಿಡುಗಡೆ ವಿಷಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:14 IST
Last Updated 19 ನವೆಂಬರ್ 2021, 16:14 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ, ಬೋಧಕೇತರ ನೌಕರರ ಸಂಘದವರು ಗುರುವಾರ ಕುಲಪತಿ ಕಚೇರಿ ಎದುರು ಧರಣಿ ನಡೆಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ, ಬೋಧಕೇತರ ನೌಕರರ ಸಂಘದವರು ಗುರುವಾರ ಕುಲಪತಿ ಕಚೇರಿ ಎದುರು ಧರಣಿ ನಡೆಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಗುತ್ತಿಗೆ ಆಧಾರಿತ ಸಿಬ್ಬಂದಿಯ ವೇತನ ಬಿಡುಗಡೆಯ ವಿಷಯಕ್ಕೆ ಸಂಬಂಧಿಸಿದಂತೆ ಕುಲಪತಿ ಪ್ರೊ.ಸ.ಚಿ. ರಮೇಶ, ಹಣಕಾಸು ಅಧಿಕಾರಿ ರಮೇಶ ನಾಯ್ಕ ಅವರು ತದ್ವಿರುದ್ಧವಾದ ಹೇಳಿಕೆ ನೀಡಿ, ಧರಣಿ ನಿರತರ ಎದುರು ಮುಜುಗರಕ್ಕೆ ಒಳಗಾದ ಪ್ರಸಂಗ ಗುರುವಾರ ನಡೆಯಿತು.

ಮುಂಬಡ್ತಿ ಲಂಚ, ಪಿಂಚಣಿ ಬಿಡುಗಡೆಗೆ ಕಮಿಷನ್‌ ಕೇಳಲಾಗುತ್ತಿದೆ. ಯುಜಿಸಿ, ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿ ನಡೆಸಲಾಗುತ್ತಿರುವ 17 ಬೋಧಕ ಹುದ್ದೆ ನೇಮಕ ಪ್ರಕ್ರಿಯೆ ಕೈಬಿಡಬೇಕೆಂದು ಆಗ್ರಹಿಸಿ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ, ಬೋಧಕೇತರ ನೌಕರರ ಸಂಘದವರು ಗುರುವಾರ ಕುಲಪತಿ ಕಚೇರಿ ಎದುರು ಧರಣಿ ನಡೆಸಿದರು.

ವಿಷಯ ಅರಿತು ಕುಲಪತಿ, ಹಣಕಾಸು ಅಧಿಕಾರಿ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಸ್ಥಳಕ್ಕೆ ಬಂದರು. ಈ ವೇಳೆ ಮಾತನಾಡಿದ ದೂರ ಕೇಂದ್ರದ ಸೂಪರಿಟೆಂಡೆಂಟ್‌ ಶಿವಕುಮಾರ, ‘ವಿಶ್ವವಿದ್ಯಾಲಯದ ತಾತ್ಕಾಲಿಕ ಸಿಬ್ಬಂದಿಯ ವೇತನ ಸರ್ಕಾರದಿಂದ ಬಿಡುಗಡೆಯಾಗಿದೆ. ಆದರೆ, ಅವರಿಗೆ ಕೊಟ್ಟಿಲ್ಲ’ ಎಂದು ಆರೋಪಿದರು. ಅದಕ್ಕೆ ಕುಲಪತಿ ಪ್ರತಿಕ್ರಿಯಿಸಿ, ‘ಈಗಾಗಲೇ ₹3.10 ಕೋಟಿ ಪಾವತಿಸಲಾಗಿದೆ. ಉಳಿದ ಹಣ ವಿದ್ಯುತ್‌ ಬಿಲ್‌ ಪಾವತಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಹಣಕಾಸು ಅಧಿಕಾರಿ, ‘ಆ ಹಣ ವಿದ್ಯುತ್‌ ಬಿಲ್‌ಗೆ ಬಳಸಿಲ್ಲ. ಅನ್ಯ ಉದ್ದೇಶಕ್ಕೆ ಬಳಸಲಾಗಿದೆ’ ಎಂದರು. ಧರಣಿ ನಿರತರು ಈ ಕುರಿತು ಉದ್ಗಾರ ತೆಗೆದಾಗ, ಇಬ್ಬರೂ ಮುಜುಗರಕ್ಕೆ ಒಳಗಾಗಬೇಕಾಯಿತು.

ADVERTISEMENT

ಮತ್ತೆ ಮಾತು ಮುಂದುವರಿಸಿದ ಶಿವಕುಮಾರ, ‘ನೇಮಕಾತಿ ಪ್ರಕ್ರಿಯೆ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಇದು ರದ್ದಾಗಬೇಕು. ರಾಜ್ಯಪಾಲರ ಆದೇಶ, ಮೀಸಲಾತಿ, ಮಹಿಳಾ ಮೀಸಲಾತಿ ಪಾಲನೆಯಾಗಿಲ್ಲ. ಕೂಡಲೇ ಅಧಿಸೂಚನೆ ರದ್ದುಪಡಿಸಬೇಕು’ ಎಂದು ದಾಖಲೆಗಳ ಸಮೇತ ಮಾತನಾಡಿದರು.

ಭಾಷಾ ನಿಕಾಯದ ಡೀನ್‌ ವೀರೇಶ ಬಡಿಗೇರ್‌ ಮಾತನಾಡಿ, ‘ನೌಕರರ ಬೇಡಿಕೆಗಳ ಕುರಿತು ಅನೇಕ ಸಿಂಡಿಕೇಟ್‌ ಸಭೆಯಲ್ಲಿ ಚರ್ಚೆಗೆ ಬಂದರೂ ಆಡಳಿತ ದಿವ್ಯ ನಿರ್ಲಕ್ಷ್ಯ ತೋರಿದ್ದರಿಂದ ಇಂದು ಈ ಪರಿಸ್ಥಿತಿ ಬಂದಿದೆ’ ಎಂದರು.

ಸಮಾಜ ವಿಜ್ಞಾನ ನಿಕಾಯದ ಡೀನ್‌ ಸಿ.ಆರ್‌. ಗೋವಿಂದರಾಜು ಮಾತನಾಡಿ, ‘ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಚರಿತ್ರೆ ವಿಭಾಗದ ಚಿನ್ನಸ್ವಾಮಿ ಎಂ. ಸೋಸಲೆ ಮಾತನಾಡಿ, ಎಲ್ಲ ಸಮಸ್ಯೆ ಬಗೆಹರಿಸುವ ತನಕ ನುಡಿಹಬ್ಬ ಆಚರಿಸುವುದು ಬೇಡ’ ಎಂದರು. ಅದಕ್ಕೆ ಕುಲಪತಿ ಸಿಟ್ಟಿಗೆದ್ದು, ‘ಅದನ್ನು ನೀವು ನನಗೆ ಹೇಳಬಾರದು. ಅದರ ಬಗ್ಗೆ ನಿರ್ಧರಿಸುವ ಅಧಿಕಾರ ನನಗಿದೆ’ ಎಂದರು.

ಪ್ರೊ. ಅಶೋಕ ಕುಮಾರ ರಂಜೇರೆ ಮಾತನಾಡಿ, ‘ನಿವೃತ್ತ ಸಂಬಂಧಿಗಳ ಪಿಂಚಣಿ, ಉಪಧನ ಕೊಡಲು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ’ ದೂರಿದರು.

ಪ್ರೊ. ಪಾಂಡುರಂಗಬಾಬು ಮಾತನಾಡಿ, ‘ಕುಲಪತಿ, ಕುಲಸಚಿವರಿಗೆ ಯಾವುದೇ ನಿಯಮ ಗೊತ್ತಿಲ್ಲ. ನೀವೇ ಎಲ್ಲ ತಿಳಿದುಕೊಂಡು ನೀವೇ ಆಡಳಿತ ಮಾಡಿ. ಬೇರೆಯವರಿಂದ ಬೇಡ’ ಎಂದರು.

‘ಕಾನೂನು ಘಟಕ ರದ್ದುಪಡಿಸಿ. ಆ ಘಟಕ ಇರುವುದು ಸಮಸ್ಯೆ ಬಗೆಹರಿಸಲು. ಸಮಸ್ಯೆ ಸೃಷ್ಟಿಸಲು ಅಲ್ಲ’ ಎಂದು ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಮಲಪನಗುಡಿ ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.