ವಿಜಯನಗರ ಬಂದ್
ಹೊಸಪೇಟೆ (ವಿಜಯನಗರ): ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿರುವ ವಿಜಯನಗರ ಬಂದ್‌ಗೆ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೊಸಪೇಟೆ ನಗರದಲ್ಲಿ ಬಂದ್‌ಗೆ ಬಹುತೇಕ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರೆ, ಕೂಡ್ಲಿಗಿ, ಹಗರಿಬೊಮ್ಮಮಹಳ್ಳಿಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ತಾಲ್ಲೂಕುಗಳಲ್ಲಿ ಸದ್ಯ ನೀರಸ ಪ್ರತಿಕ್ರಿಯೆ ಕಾಣಿಸಿದೆ.
ಎಲ್ಲೆಡೆ ಖಾಸಗಿ ವಾಹನಗಳ ಓಡಾಟ ಎಂದಿನಂತೆಯೇ ಇದೆ. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದರೆ, ಸರ್ಕಾರಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿಲ್ಲ. ಆದರೆ ಬಂದು, ಹೋಗಲು ಬಸ್‌ಗಳು ಇಲ್ಲದ ಕಾರಣ ಈ ಶಾಲೆಗಳಲ್ಲಿ ಹಾಜರಾತಿ ಬಹಳ ಕಡಿಮೆ ಇರಲಿದೆ.
ಹೊಸಪೇಟೆಯಲ್ಲಿ ಬೆಳಿಗ್ಗೆ 9ರವರೆಗೆ ಆಟೋರಿಕ್ಷಾ ಓಡಾಟ ಇತ್ತು. ಆದರೆ ಬಳಿಕ ಆಟೊ ಓಡಾಟ ಕಡಿಮೆಯಾಗಿದೆ. ಬಸ್‌ಗಳಂತೂ ಬೆಳಿಗ್ಗೆ 6 ಗಂಟೆಯಿಂದಲೇ ಇಲ್ಲವಾಗಿದೆ. ದೂರದ ಊರುಗಳಿಂದ ಬರುವ ಬಸ್‌ಗಳು ನಗರದ ಹೊರಭಾಗದಲ್ಲೇ ಪ್ರಯಾಣಿಕರನ್ನು ಕೆಳಗಿಳಿಸಿ ಮುಂದಕ್ಕೆ ಸಾಗುತ್ತಿವೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿದೆ.
ನಗರದಲ್ಲಿ ಹೆಚ್ಚಿನ ಹೋಟೆಲ್‌ಗಳು ಬೆಳಿಗ್ಗೆ 9ರವರೆಗೆ ತೆರೆದಿದ್ದವು. ಇದೀಗ ಒಂದೊಂದೇ ಹೋಟೆಲ್‌ಗಳು ಬಾಗಿಲು ಹಾಕತೊಡಗಿವೆ. ತರಕಾರಿ ಮಾರುಕಟ್ಟೆ ಸಹ ತೆರೆದಿತ್ತು. ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. 9ರ ಬಳಿಕ ಮುಚ್ಚುವುದಾಗಿ ಕೆಲವು ಬಂಕ್‌ಗಳ ಸಿಬ್ಬಂದಿ ತಿಳಿಸಿದರು.
ಮಾಲ್‌ಗಳು ಇನ್ನೂ ತೆರೆಯಬೇಕಿದ್ದು, ಅಂಬೇಡ್ಕರ್ ವೃತ್ತದ ಸಮೀಪದ ಕಾಲೇಜು ರಸ್ತೆಯಲ್ಲಿ ಹೆಚ್ಚಿನ ಶಾಪಿಂಗ್ ಮಾಲ್‌ಗಳಿವೆ. ಅಂಬೇಡ್ಕರ್ ವೃತ್ತದಲ್ಲೇ ಪ್ರಮುಖ ಪ್ರತಿಭಟನೆ ನಡೆಯುವುದರಿಂದ ಈ ಭಾಗದಲ್ಲಿ ಮಾಲ್‌ಗಳು ತೆರೆಯುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.
ಗುರುವಾರ ಹೊಸಪೇಟೆ ನಗರದಲ್ಲಿ ಕಿರಾಣಿ ಅಂಗಡಿಗಳಿಗೆ ವಾರದ ರಜೆ ಇರುತ್ತದೆ. ಹೀಗಾಗಿ ಅಂಗಡಿಗಳೆಲ್ಲವೂ ಸಹಜವಾಗಿಯೇ ಬಂದ್ ಆಗಿವೆ.
ಹಗರಿಬೊಮ್ಮನಹಳ್ಳಿ, ಕೂಡ್ಲಿಗಿಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದು, ಆಟೊ ಓಡಾಟ ಸಹ ವಿರಳವಾಗಿದೆ.
ಪೊಲೀಸ್ ಭದ್ರತೆ: ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಹಲವೆಡೆ ರಸ್ತೆಗೆ ಅಡ್ಡಲಾಗಿ ತಡೆಗಳನ್ನು ಸಹ ಇಟ್ಟಿದ್ದಾರೆ. ಟಿ.ಬಿ.ಡ್ಯಾಂ ರಸ್ತೆಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿಯಲ್ಲಿ ವಾಹನಗಳನ್ನು ತಪಾಸಣೆ ಮಾಡಿ ನಗರದೊಳಗೆ ಬಿಡಲಾಗುತ್ತಿದೆ.
ಕೂಡ್ಲಿಗಿ: ಬೆಳಿಗ್ಗೆ ಭಾಗಶಃ ಬಂದ್
ಕೂಡ್ಲಿಗಿ (ವಿಜಯನಗರ ಜಿಲ್ಲೆ): ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಗುರುವಾರ ಕರೆ ನೀಡಲಾಗಿರುವ ಜಿಲ್ಲಾ ಬಂದ್ ಪಟ್ಟಣದಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಕೆಲ ಚಹಾದಂಗಡಿಗಳು ಹಾಗೂ ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಬಂದ್‍ಗೆ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿರುವುದರಿಂದ ಎಲ್ಲಿಯೂ ಅವರು ಅಂಗಡಿಗಳನ್ನು ತೆರೆದಿಲ್ಲ. ಆದರೆ ಸಾರಿಗೆ ಸಂಸ್ಥೆಯ ಕೆಲ ಬಸ್ಸುಗಳು ಓಡಾಡುತ್ತಿವೆ. ಇದರೊಂದಿಗೆ ಎಲ್ಲಾ ಖಾಸಗಿ ಬಸ್ಸುಗಳು, ವಾಹನಗಳು ಎಂದಿನಂತೆ ಸಂಚಾರ ಮಾಡುತ್ತಿವೆ.
ಪಟ್ಟಣದ ಕೆಲ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿದ್ದು, ಎಂದಿನಂತೆ ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ತೆರಳಬೇಕಾಗಿದ್ದ ಶಿಕ್ಷಕರು, ಸಾರ್ವಜನಿಕರಿ ಬಸ್ಸುಗಳಿಗೆ ಕಾದು ನಿಂತಿದ್ದು ಕಂಡು ಬಂದಿತು.
ಹರಪನಹಳ್ಳಿ, ಹೂವಿನಹಡಗಲಿಯಲ್ಲಿ ಸಹಜ ಜನಜೀವನ
ಹೊಸಪೇಟೆ (ವಿಜಯನಗರ): ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿರುವ ವಿಜಯನಗರ ಬಂದ್‌ಗೆ ಹೊಸಪೇಟೆಯಲ್ಲಿ ಮಾತ್ರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಗಳಲ್ಲಿ ಭಾಗಶಃ ಸ್ಪಂದನ ವ್ಯಕ್ತವಾಗಿದ್ದರೆ, ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರುಗಳಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ.
ಹೊಸಪೇಟೆಯಲ್ಲಿ ಪೆಟ್ರೋಲ್ ಬಂಕ್‌ಗಳು ಒಂದೊಂದಾಗಿ ಮುಚ್ಚುತ್ತಿದ್ದು, ಪ್ರಮುಖ ಮಾರುಕಟ್ಟೆಗಳೆಲ್ಲ ಮುಚ್ಚಿವೆ. ಸದಾ ಜನರಿಂದ ಗಿಜಿಗಿಡುತ್ತಿದ್ದ ಬಸ್ ನಿಲ್ದಾಣ ಪರಿಸರ, ಮೇನ್ ಬಜಾರ್, ಗಾಂಧಿ ಚೌಕ್‌ಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ. ಕಾಲೇಜ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮಾಲ್‌ಗಳು ಬೆಳಿಗ್ಗೆ 10.30 ಆಗಿದ್ದರೂ ತೆರೆದಿಲ್ಲ, ಈ ಮೂಲಕ ಅವುಗಳು ಸಹ ಬಂದ್‌ಗೆ ಬೆಂಬಲ ಸೂಚಿಸಿದ್ದು ಕಾಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.