ADVERTISEMENT

ವಿಜಯನಗರ ಜಿಲ್ಲೆಗೆ ಕೆಳಹಂತದ ಸಿಬ್ಬಂದಿ ಕೊರತೆ ನೀಗಿಸಲಾಗುವುದು: ಸಚಿವೆ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 15:52 IST
Last Updated 16 ಜೂನ್ 2022, 15:52 IST
ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ
ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ    

ಹೊಸಪೇಟೆ (ವಿಜಯನಗರ): ‘ನೂತನ ವಿಜಯನಗರ ಜಿಲ್ಲೆಗೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಬಂದಿದ್ದಾರೆ. ಆದರೆ, ಕೆಳಹಂತದ, ಅದರಲ್ಲೂ ‘ಡಿ’ ಗ್ರುಪ್‌ ಸಿಬ್ಬಂದಿ ಕೊರತೆ ಇದೆ.. ಆದಷ್ಟು ಶೀಘ್ರ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಈ ಕೊರತೆ ನೀಗಿಸಲು ಶ್ರಮಿಸುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯನಗರಕ್ಕೆ ಅಧಿಕಾರಿಗಳ ಕೊರತೆ ಬಹಳ ಇತ್ತು. ಆದರೆ, ಈಗ ಈ ಸಮಸ್ಯೆ ಇಲ್ಲ. ಕೆಳಹಂತದ ಸಿಬ್ಬಂದಿ ಬೇಕು. ಈಗಾಗಲೇ ಕೆಲವರು ನೇಮಕಗೊಂಡಿದ್ದರೂ ಬಂದಿಲ್ಲ. ಕೆಲವರ ವೇತನ ಸಮಸ್ಯೆ ಆಗಿದೆ. ಜಿಲ್ಲಾಧಿಕಾರಿಗಳಿಂದ ಇಲಾಖಾವಾರು ಪಟ್ಟಿ ಪಡೆದು, ಸಿ.ಎಂ. ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಫೆಬ್ರುವರಿಯಲ್ಲಿ ಚಾಲನೆ ಕೊಟ್ಟ ಕಾಮಗಾರಿಗಳೆಲ್ಲ ಪ್ರಗತಿಯಲ್ಲಿವೆ. ಉದ್ದೇಶಿತ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಬದಲಾಗಿದೆ. ಮೆಡಿಕಲ್‌ ಕಾಲೇಜು, ಪಾರ್ಕಿಂಗ್‌ ಬೇಕಾಗಿರುವುದರಿಂದ ಹೊಸ ಜಾಗ ನೋಡಿದ್ದೇವೆ. ಹಣ ಬಿಡುಗಡೆಯಾಗಿದೆ. ಆದಷ್ಟು ಬೇಗ ಅದಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

₹17.33 ಕೋಟಿ ಪರಿಹಾರ
‘ಜಿಲ್ಲೆಯಲ್ಲಿ ಒಟ್ಟಾರೆ 1,024 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಹೆಚ್ಚಿನ ಮಳೆಗೆ ಬೆಳೆಗಳಿಗೆ ಹಾನಿ ಉಂಟಾಗಿದೆ. ಇದುವರೆಗೆ ₹17.33 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗಿದ್ದು. ಇನ್ನುಳಿದ ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಕೆಲವರ ಮನೆ ಬಿದ್ದರೂ ತಾಂತ್ರಿಕ ಕಾರಣಗಳಿಂದ ಪರಿಹಾರ ಸಿಕ್ಕಿಲ್ಲ. ಅಂತಹವರಿಗೂ ಕೊಡಲಾಗುವುದು’ ಎಂದು ಹೇಳಿದರು. ‘ಮುಂಗಾರು ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಕಡಿಮೆಯಾಗಿದೆ. ಶುಕ್ರವಾರದಿಂದ ಮಳೆಯಾಗುವ ಸಾಧ್ಯತೆ ಜಾಸ್ತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಗತ್ಯವಿದ್ದಷ್ಟು ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇದೆ’ ಎಂದರು.

ಯೋಗ ದಿನಕ್ಕೆ ಉಚಿತ ಬಸ್‌
‘ದೇಶದ 75 ಸ್ಥಳಗಳಲ್ಲಿ ಜೂ. 21ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಅದರಲ್ಲಿ ಹಂಪಿ ಕೂಡ ಒಂದಾಗಿದ್ದು, 6 ಸಾವಿರ ಜನ ಒಟ್ಟಿಗೆ ಯೋಗ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬಂದು ಹೋಗುವವರಿಗೆ 63 ಬಸ್‌ಗಳ ಉಚಿತ ವ್ಯವಸ್ಥೆ ಮಾಡಲಾಗಿದೆ’ ಎಂದು ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ತಿಳಿಸಿದರು.‘ಹಂಪಿ ಎದುರು ಬಸವಣ್ಣ ಮಂಟಪದ ಮುಂಭಾಗದಲ್ಲಿ ಕಾರ್ಯಕ್ರಮ ಜರುಗಲಿದೆ. ಕೇಂದ್ರ ಹಾಗೂ ರಾಜ್ಯದ ಸಚಿವರು ಭಾಗವಹಿಸುವರು. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳವರು ಪಾಲ್ಗೊಳ್ಳುವರು. ಮ್ಯಾಟ್‌, ಟೀ ಶರ್ಟ್‌, ಕ್ಯಾಪ್‌, ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ಪ್ರಧಾನಿ ಕಾರ್ಯಕ್ರಮದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಅಂದು ಯಾವ ಆಸನಗಳನ್ನು ಮಾಡಬೇಕು ಎನ್ನುವುದರ ಬಗ್ಗೆ ಕಿರುಪುಸ್ತಕಗಳನ್ನು ಕೂಡ ವಿತರಿಸಲಾಗುವುದು. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ಇಲ್ಲಿ ಹೇಗಿದೆಯೋ ಗೊತ್ತಿಲ್ಲ, ಯಾರು ಅನ್ಯಥಾ ಭಾವಿಸಬಾರದು’
‘ನಾನು ಕೆಲವೆಡೆ ಸಭೆ ನಡೆಸಿದಾಗ ಮಾಧ್ಯಮದವರು ಬರುತ್ತಿರಲಿಲ್ಲ. ಹೀಗಾಗಿ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳುತ್ತಿದ್ದೆ. ಇಲ್ಲಿ ಹೇಗಿದೆಯೋ ನನಗೆ ಗೊತ್ತಿಲ್ಲ. ಯಾರು ಕೂಡ ಅನ್ಯಥಾ ಭಾವಿಸಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿದರು. ‘ನೀವು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ ಔಚಿತ್ಯವೇನು? ಇದು ಹೊಸ ಸಂಪ್ರದಾಯ. ನೀವೂ ಜನರಿಗಾಗಿ ಕೆಲಸ ಮಾಡುತ್ತಿದ್ದೀರಿ. ನಾವೂ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಈ ರೀತಿ ಆಗಿದ್ದು ಇದೇ ಮೊದಲು. ಈ ರೀತಿ ಮಾಡಿರುವುದು ಸರಿಯೇ?’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.