ADVERTISEMENT

ರೈಲ್ವೆ ಮೇಲ್ಸೇತುವೆ ನಿರ್ಮಿಸಿ: ವಿಜಯನಗರ ರೈಲ್ವೆ ಬಳಕೆದಾರರ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:49 IST
Last Updated 13 ಜುಲೈ 2025, 5:49 IST
ಹೊಸಪೇಟೆಯ ಅನಂತಶಯನಗುಡಿ ರೈಲು ಗೇಟ್‌ನಲ್ಲಿ ಸಂಚಾರದಟ್ಟಣೆ ಉಂಟಾಗಿರುವುದು
ಹೊಸಪೇಟೆಯ ಅನಂತಶಯನಗುಡಿ ರೈಲು ಗೇಟ್‌ನಲ್ಲಿ ಸಂಚಾರದಟ್ಟಣೆ ಉಂಟಾಗಿರುವುದು   

ಹೊಸಪೇಟೆ (ವಿಜಯನಗರ): ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಶುಕ್ರವಾರ ರಾತ್ರಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ಭೇಟಿ ಮಾಡಿ, ನಗರದಲ್ಲಿ ಹಾದು ಹೋಗುವ ಹಲವೆಡೆ ಆದ್ಯತೆ ಮೇರೆಗೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಮನವಿ ಸಲ್ಲಿಸಿದರು.

‘ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಂತಿರುವ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಟಿ.ಬಿ. ಡ್ಯಾಂ ರಸ್ತೆಯಲ್ಲಿನ ಎಲ್.ಸಿ.ಗೇಟ್ ನಂ.10ನಲ್ಲಿ, ಚಿತ್ತವಾಡ್ಗಿ ಐಎಸ್‌ಆರ್‌ ಫ್ಯಾಕ್ಟರಿ ಹತ್ತಿರದ ಎಲ್.ಸಿ.ಗೇಟ್ ನಂ.4, ರೈಲು ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ 88 ಮುದ್ಲಾಪುರ ಗೇಟ್‌ನ ಎಲ್‌.ಸಿ. ಗೇಟ್‌ ನಂ 83 ಇಲ್ಲಿ ಅಗತ್ಯವಾಗಿ ಮೇಲ್ಸೇತುವೆ ನಿರ್ಮಿಸಬೇಕು. ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಂದಗತಿಯಲ್ಲಿ ಸಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಮಾರ್ಗದ ಎರಡೂ ಕಡೆ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಲಾಯಿತು.

ವಿಶೇಷ ರೈಲಾಗಿ ಹೆಚ್ಚುವರಿ ಟಿಕೆಟ್ ದರ ಇರುವ ವಿಜಯಪುರ - ಯಶವಂತಪುರ (06545/06546) ರೈಲನ್ನು ಕಾಯಂಗೊಳಿಸಿ ಪ್ರಯಾಣ ದರ ಇಳಿಸಬೇಕು, ಉತ್ತರ ಕರ್ನಾಟಕ ಜಿಲ್ಲೆಗಳಿಂದ ಮಂತ್ರಾಲಯ, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕೆ ಸಂಚಾರ ರದ್ದಾಗಿರುವ ಬೆಳಗಾವಿ-ಮಂಗಳೂರು (07335/07336) ಪುನರಾರಂಭಿಸಬೇಕು.ಹೊಸಪೇಟೆ-ತುಮಕೂರು ನಡುವೆ ನೂತನ ರೈಲು ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಯಿತು.

ADVERTISEMENT

ಭರಮನಗೌಡ್ರು, ವೈ.ಯಮುನೇಶ್, ಮಹೇಶ್ ಕುಡುತಿನಿ, ಅರವಿಂದ ಜಾಲಿ, ದೀಪಕ್ ಉಳ್ಳಿ, ವಿಶ್ವನಾಥ ಕೌತಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.