ADVERTISEMENT

ವಿಜಯನಗರ: ಹೆದ್ದಾರಿ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:35 IST
Last Updated 24 ಆಗಸ್ಟ್ 2025, 4:35 IST
ಹೆದ್ದಾರಿ ಹಾಗೂ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸಿರುಗುಪ್ಪ ಹಿತರಕ್ಷಣಾ ಸಮಿತಿ ವತಿಯಿಂದ ಸಿರುಗುಪ್ಪ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು
ಹೆದ್ದಾರಿ ಹಾಗೂ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸಿರುಗುಪ್ಪ ಹಿತರಕ್ಷಣಾ ಸಮಿತಿ ವತಿಯಿಂದ ಸಿರುಗುಪ್ಪ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು   

ಸಿರುಗುಪ್ಪ: ಹೆದ್ದಾರಿ ಹಾಗೂ ರಸ್ತೆಗಳ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸಿರುಗುಪ್ಪ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯು ನಗರದ ಕೆ.ಇ.ಬಿ ಗಣೇಶ ದೇವಸ್ಥಾನದಿಂದ ಕನಕದಾಸ, ವಾಲ್ಮೀಕಿ ವೃತ್ತದ ಮೂಲಕ ಹಾಯ್ದು, ಗಾಂಧಿ ವೃತ್ತದಲ್ಲಿ 3 ಸಾವಿರ ಜನರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

‘ನಗರದ ದೇವಲಾಪುರ ಕ್ರಾಸ್, ಬಸ್‌ಡಿಪೋ, ಹೌಸಿಂಗ್ ಬೋರ್ಡ್ ಕಾಲೊನಿ, ಅಂಬೇಡ್ಕರ್ ವೃತ್ತ, ಎಪಿಎಂಸಿ ಮುಂಭಾಗ, ಶಿವಶಕ್ತಿ ಭವನ, ಟ್ರೆಂಡರ್‌, ಗ್ರಾಮೀಣ ಬ್ಯಾಂಕ್‌, ಅಂಬೇಡ್ಕರ್‌ ವೃತ್ತ, ಟಿಪ್ಪುಸುಲ್ತಾನ್‌ ವೃತ್ತದ ಹತ್ತಿರ ಗುಂಡಿಗಳು ನಿರ್ಮಾಣವಾಗಿದ್ದು, ಇದರಿಂದ ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಬೀದರ್‌ ಜಿಲ್ಲೆಯ ಜೇರ್ವಗಿಯಿಂದ ಚಾಮರಾಜನಗರದ ವರೆಗೆ ಸಿರುಗುಪ್ಪ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ತೀರ ಹದಗೆಟ್ಟಿದೆ. ಇಲ್ಲಿಯವರೆಗೆ 49 ಜನರು ಈ ರಸ್ತೆಯಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ. ಆದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವಾಗಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಸಿಡಿದೆದ್ದರು.

‘ಹದಗೆಟ್ಟ ರಸ್ತೆಯಲ್ಲಿ ಗುಂಡಿಗಳದ್ದೆ ದರ್ಬಾರ್‌ ಆಗಿದೆ. ಮಳೆಯಾದರೆ ಮಿನಿ ಕೃಷಿ ಹೊಂಡಗಳಾಗುತ್ತವೆ. ಬಿಸಿಲು ಬಂದರೆ ಧೂಳಿನ ಮಜ್ಜನವಾಗುತ್ತದೆ’ ಎಂದು ವಕೀಲರು ಧ್ವನಿಗೂಡಿಸಿದರು.

‘ಸಿರುಗುಪ್ಪ ನಗರಕ್ಕೆ ವಿವಿಧ ತಾಲ್ಲೂಕು, ಜಿಲ್ಲೆಯಿಂದ ಆಗಮಿಸುವ ಜನರು ಇಲ್ಲಿನ ಧೂಳು ಹಾಗೂ ರಸ್ತೆಯಲ್ಲಿನ ಗುಂಡಿಗಳನ್ನು ನೋಡಿ ಬೇಸತ್ತು ಹೋಗಿದ್ದಾರೆ’ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

‘ಸಿರುಗುಪ್ಪ ನಗರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವ ಗುತ್ತಿಗೆದಾರರನ್ನು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳು, ವಕೀಲರು, ಶಿಕ್ಷಕರು, ಉಪನ್ಯಾಸಕರು, ಅಂಗಡಿ ಮಾಲೀಕರು, ಸಂಘ ಸಂಸ್ಥೆಗಳು ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದ ನಾಗರಿಕರು ಸ್ವ ಇಚ್ಛೆಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.