ಸಂಗ್ರಹ ಚಿತ್ರ
ಹೊಸಪೇಟೆ (ವಿಜಯನಗರ): ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ಶುಕ್ರವಾರ ಬೆಳಿಗ್ಗೆ ಅಣೆಕಟ್ಟೆಯ ಗೇಟ್ ತೆರೆದು ನೀರನ್ನು ಹರಿಸುವ ಎಚ್ಚರಿಕೆಯನ್ನು ತುಂಗಭದ್ರಾ ಮಂಡಳಿ ನೀಡಿದೆ.
ತುಂಗಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್, ಭದ್ರಾ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ಹಾಗೂ ವರದಾ ನದಿಯಿಂದ 2 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆ ವೇಳೆಗೆ ಒಳಹರಿವಿನ ಪ್ರಮಾಣ 25 ಸಾವಿರ ಕ್ಯೂಸೆಕ್‌ಗೆ ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ ಕೆಲವು ಗೇಟ್‌ಗಳನ್ನು ತೆರೆದು 5 ಸಾವಿರ ಕ್ಯೂಸೆಕ್‌ನಿಂದ 20 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಗುರುವಾರ ಮಧ್ಯಾಹ್ನದಿಂದ ಸಂಜೆಯತನಕ ಹೊಸಪೇಟೆ ಭಾಗದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಸಂಜೆ ಒಂದು ಗಂಟೆ ಕಾಲ ಬಿರುಸಿನ ಮಳೆಯಾಯಿತು. ಕೂಡ್ಲಿಗಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಹರಪನಹಳ್ಳಿ, ಕೊಟ್ಟೂರು ಭಾಗದಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ.
ಹೊಸಪೇಟೆ ನಗರದಲ್ಲಿ ಗುರುವಾರ ಸಂಜೆ ಒಂದು ಗಂಟೆ ಕಾಲ ಬಿರುಸಿನ ಮಳೆ ಸುರಿಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.