ADVERTISEMENT

ಬೇವಿನ ಮರ ಏರಿ ಕುಳಿತ ಕರಡಿ: ಕೆಳಗಿಳಿಸಿ ಕಾಡಿಗೆ ಬಿಡಲು 12 ಗಂಟೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2022, 12:18 IST
Last Updated 27 ಮೇ 2022, 12:18 IST
   

ತೋರಣಗಲ್ಲು/ಹೊಸಪೇಟೆ: ಅರಣ್ಯ ಇಲಾಖೆಯವರು ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಕರಡಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ತೋರಣಗಲ್ಲು ಸಮೀಪದ ಕುರೇಕುಪ್ಪ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ 2ಗಂಟೆಗೆ ಕರಡಿ ಪ್ರತ್ಯಕ್ಷವಾಗಿತ್ತು. ಕೆಲ ಗ್ರಾಮಸ್ಥರು ಅದನ್ನು ಕಂಡು ಆತಂಕಕ್ಕೆ ಒಳಗಾದರು. ಕೆಲವರು ಅದನ್ನು ಹೆದರಿಸಿ ಓಡಿಸಲು ಪ್ರಯತ್ನಿಸಿದರು. ಈ ವೇಳೆ ಕರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಬೇವಿನ ಮರ ಏರಿ ಕುಳಿತುಕೊಂಡಿತು. ಬಳಿಕ ವಿಷಯ ತಿಳಿದು ಅರಣ್ಯ ಇಲಾಖೆ ಹಾಗೂ ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ವೈದ್ಯೆ ಡಾ. ವಾಣಿಶ್ರೀ ಅವರ ತಂಡ ಸ್ಥಳಕ್ಕೆ ಆಗಮಿಸಿತು.

ಎರಡು ಅರವಳಿಕೆ ನೀಡಿದ ನಂತರ, ಜಿಂದಾಲ್‌ನಿಂದ ಕ್ರೇನ್‌ ತರಿಸಿ, ಕರಡಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಕಾಡಿಗೆ ಕೊಂಡೊಯ್ದರು. ಆಗ ಸಮಯ ಮಧ್ಯಾಹ್ನ 2 ಗಂಟೆಯಾಗಿತ್ತು. ಕರಡಿ ರಕ್ಷಣೆಗೆ ನಡೆದ ಕಾರ್ಯಾಚರಣೆ ನೋಡಲು ನೂರಾರು ಜನ ಸ್ಥಳದಲ್ಲಿ ನೆರೆದಿದ್ದರು.
‘ನಮ್ಮ ವೈದ್ಯರು ಹಾಗೂ ಅವರ ತಂಡ ಸೇರಿಕೊಂಡು ಕುರೇಕುಪ್ಪದಲ್ಲಿ ಹೆಣ್ಣು ಕರಡಿಯನ್ನು ರಕ್ಷಿಸಿದ್ದಾರೆ’ ಎಂದು ವಾಜಪೇಯಿ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.