ADVERTISEMENT

ನನ್ನ ಮಾತು ಕೇಳಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರಲಿಲ್ಲ: ಸಚಿವ ಜಮೀರ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 11:08 IST
Last Updated 1 ನವೆಂಬರ್ 2025, 11:08 IST
   

ಹೊಸಪೇಟೆ (ವಿಜಯನಗರ): ‘ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯಿರಿ ಎಂದು ಹೇಳಿದ್ದೆ, ನನ್ನ ಮಾತು ಕೇಳಲಿಲ್ಲ, ಕೇಳಿದ್ದರೆ ಅವರು ಜೈಲಿಗೆ ಹೋಗುತ್ತಿರಲಿಲ್ಲ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಇಲ್ಲಿ ಶನಿವಾರ ನಡೆದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡಿದ ಅವರು, ಹಣಕಾಸು ನಿರ್ವಹಣೆ ಎಂಬುದು ಸುಲಭದ ಮಾತಲ್ಲ, ಅದರಲೂ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆದವರು. ಸಿದ್ದರಾಮಯ್ಯ ಆಗಲೇ 10 ಬಾರಿ ಬಜೆಟ್ ಮಂಡಿಸಿದ್ದರು. ರಾಜ್ಯದ ಹಿತದೃಷ್ಟಿಯಿಂದ ಒಂದೆರಡು ಗಂಟೆ ಕೂತು ಸಲಹೆ ಪಡೆಯುವಂತೆ ನಾನು ಕೇಳಿದ್ದೆ, ನನ್ನ ಮಾತನ್ನು ತಿರಸ್ಕರಿಸಿದರು. ಇದರಿಂದಾಗಿಯೇ ಅವರಿಗೆ ಹಣಕಾಸು ನಿರ್ವಹಣೆ ಸಾಧ್ಯವಾಗಲಿಲ್ಲ, ಜೈಲಿಗೂ ಹೋಗುವ ಪರಿಸ್ಥಿತಿ ಬಂತು’ ಎಂದರು.

‘ಈಗಿನ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟ ಬಳಿಕ ಯಶಸ್ವಿಯಾಗಿ ಅಭಿವೃದ್ಧಿ ಕೆಲಸಗಳನ್ನೂ ನಡೆಸುತ್ತ ಬಂದಿದೆ. ಪ್ರತಿ ತಿಂಗಳು ಗ್ಯಾರಂಟಿ ರೂಪದಲ್ಲಿ ಒಂದು ಕುಟುಂಬಕ್ಕೆ ₹6,500 ದುಡ್ಡಿನ ಉಳಿತಾಯವಾಗುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ಅನುಭವದಿಂದಾಗಿಯೇ ಇದೆಲ್ಲವೂ ಸಾಧ್ಯವಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.