ADVERTISEMENT

ಯುವ ಕಾಂಗ್ರೆಸ್‌ನಲ್ಲಿ ಸುಂಟರಗಾಳಿ ಸನ್ನಿಹಿತ?

ಪಕ್ಷಕ್ಕಾಗಿ ಕೆಲಸ ಮಾಡದ ಆರೋಪ–ನೋಟಿಸ್‌ಗಳ ಮೇಲೆ ನೋಟಿಸ್‌

ಎಂ.ಜಿ.ಬಾಲಕೃಷ್ಣ
Published 20 ನವೆಂಬರ್ 2025, 5:50 IST
Last Updated 20 ನವೆಂಬರ್ 2025, 5:50 IST
ಅಶೋಕ್‌ ಬಿ.ನಾಯ್ಕ್‌
ಅಶೋಕ್‌ ಬಿ.ನಾಯ್ಕ್‌   

ಹೊಸ‍ಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್‌ನಲ್ಲಿ ಸುಂಟರಗಾಳಿ ಬೀಸುವ ಲಕ್ಷಣ ಕಾಣಿಸಿದ್ದು, ಅಧ್ಯಕ್ಷ ಅಶೋಕ್‌ ಬಿ.ನಾಯ್ಕ್ ಅವರನ್ನು ಅನರ್ಹಗೊಳಿಸುವ ಅಥವಾ ಮೇಲುಸ್ತುವಾರಿ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆ ದಟ್ಟವಾಗಿದೆ.

ಫೆಬ್ರುವರಿ 8ರಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಶೋಕ್ ನಾಯ್ಕ್ ಆಯ್ಕೆ ಆದಾಗಿನಿಂದ ಪಕ್ಷದ ಜಿಲ್ಲಾ ಕಚೇರಿಗೆ ಹೋಗಿಲ್ಲ, ತಮಗೆ ತೋಚಿದಂತೆ ಹತ್ತಾರು ಯುವಕರನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ, ಈಚೆಗೆ ನಡೆದ ’ಓಟ್‌ ಚೋರ್‌ ಗದ್ದಿ ಚೋಡ್‌’ ಅಭಿಯಾನದಲ್ಲಿ ಸಹ ಪಾಲ್ಗೊಂಡಿಲ್ಲ. ಇದೆಲ್ಲ ಕಾರಣಕ್ಕೆ ಪಕ್ಷದ ಜಿಲ್ಲಾ ಸಮಿತಿಯವರು ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಮೇಲಾಗಿ ನವೆಂಬರ್‌ 16ರಂದು ಬೆಂಗಳೂರಿನಲ್ಲಿ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿಗೆ ಅಶೋಕ್ ಮತ್ತು ಅವರ ತಂಡ ಗೈರಾಗಿತ್ತು. ಇದು ಪಕ್ಷದ ವರಿಷ್ಠರನ್ನು ಕೆರಳುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

‘ವೈಯಕ್ತಿಕವಾಗಿ ನನಗೆ ಅಶೋಕ್‌ ಮೇಲೆ ಯಾವ ದ್ವೇಷವೂ ಇಲ್ಲ. ಆದರೆ ಪಕ್ಷದ ಶಿಸ್ತಿನಂತೆ ಅವರು ನಡೆದುಕೊಳ್ಳುತ್ತಿಲ್ಲ. ಈಗಾಗಲೇ ನಾನು ಅವರಿಗೆ ಒಂದು ನೋಟಿಸ್ ನೀಡಿದ್ದೇನೆ. ರಾಜ್ಯ ಯುವ ಕಾಂಗ್ರೆಸ್‌ನಿಂದ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಯುವ ಕಾಂಗ್ರೆಸ್‌ನ ಒಬ್ಬ ಚುನಾಯಿತ ಅಧ್ಯಕ್ಷರಾಗಿದ್ದರೂ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಕಾರಣ ನೀಡಿ ಅವರನ್ನು ಅನರ್ಹಗೊಳಿಸುವ ಅವಕಾಶ ಇದೆ, ಅದಾಗದಿದ್ದರೆ ಮೇಲುಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡುವ ಅವಕಾಶವೂ ಇದೆ. ಇದರ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಹಿಂದೆ ಎಚ್‌.ಆರ್‌.ಗವಿಯಪ್ಪ ಅವರ ಪುತ್ರ ಗುರುದತ್ತ ಅವರನ್ನು ಸಹ ನಿಷ್ಕ್ರಿಯ ಅಧ್ಯಕ್ಷ ಎಂಬ ಕಾರಣಕ್ಕೆ ಪದಚ್ಯುತಿಗೊಳಿಸಿದ್ದು ಇದೆ. ಅದೇ ಪರಿಸ್ಥಿತಿ ಮತ್ತೆ ಬರುವ ಸಾಧ್ಯತೆ ಇಲ್ಲದಿಲ್ಲ. ನಾನು ಈ ನಿಟ್ಟಿನಲ್ಲಿ ಶೀಘ್ರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸುತ್ತೇನೆ, ವರಿಷ್ಠರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಈ ಮಧ್ಯೆ, ಅಶೋಕ್‌ ನಾಯ್ಕ್ ಅವರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ವದಂತಿ ಹರಡಿದ್ದು, ನೋಟಿಸ್‌ಗಳು ಮತ್ತು ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ಸಿರಾಜ್‌ ಶೇಖ್‌
ಓಟ್‌ ಚೋರಿ ವಿರುದ್ಧ ಸಹಿ ಸಂಗ್ರಹದಲ್ಲಿ ಶಾಸಕ ಗವಿಯಪ್ಪ ಮತ್ತು ಮಾಜಿ ಶಾಸಕ ಭೀಮಾ ನಾಯ್ಕ್ ಅವರ ಕೊಡುಗೆ ಶೂನ್ಯ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ
ಸಿರಾಜ್‌ ಶೇಖ್‌ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ

ರಾಜ್ಯ ಯುವ ಕಾಂಗ್ರೆಸ್‌ನಿಂದ ನೋಟಿಸ್‌

ಬೆಂಗಳೂರಿನಲ್ಲಿ ನ.16ರಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ರಾಜ್ಯ ಉಸ್ತುವಾರಿ ನಿಗಮ್‌ ಭಂಡಾರಿ ರಾಜ್ಯ ಅಧ್ಯಕ್ಷ ಎಚ್‌.ಎಸ್.ಮಂಜುನಾಥ್‌ ಅವರ ಸಮ್ಮುಖದಲ್ಲಿ ಕಾರ್ಯಕಾರಿಣಿ ನಡೆದಿತ್ತು. ಅದಕ್ಕೆ ಗೈರಾದುದು ಏಕೆ ಎಂಬುದಕ್ಕೆ ನಾಲ್ಕು ದಿನದೊಳಗೆ ಕಾರಣ ನೀಡಬೇಕೆಂದು ಸೂಚಿಸಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಹುಬಲಿ ಅವರು ನ.17ರಂದು  ಅಶೋಕ್‌ ನಾಯ್ಕ್ ಅವರಿಗೆ ನೋಟಿಸ್ ನೀಡಿದ್ದಾರೆ. ಅಶೋಕ್‌ ನಾಯ್ಕ್ ಜತೆಗೆ ಸಭೆಗೆ ಗೈರಾಗಿದ್ದ ಜಿಲ್ಲೆಯ ಇತರ ಪದಾಧಿಕಾರಿಗಳಾದ ಪ್ರದೀಪ್‌ ಹರೂಣ್ ಶೇಖ್‌ (ಹೊಸಪೇಟೆ) ಗೌಸ್‌ (ಕಮಲಾಪುರ) ದಾವೂದ್‌ (ಹೊಸಹಳ್ಳಿ) ಮಂಜುನಾಥ ಎಸ್‌.ವಿ.ಕೊಟ್ರೇಶ (ಕೂಡ್ಲಿಗಿ) ಮತ್ತೀಹಳ್ಳಿ (ಚಿಗಟೇರಿ) ಡಿ.ಚೌಡಪ್ಪ ಎಚ್‌.ಟಿ (ಹರಪನಹಳ್ಳಿ) ವಿನಾಯಕ (ಕೊಟ್ಟೂರು) ಶರತ್‌ಕುಮಾರ್ ಎ.ಪ್ರೇಮಕುಮಾರ್‌ (ಹಗರಿಬೊಮ್ಮನಹಳ್ಳಿ) ಗೌಸಮುದ್ದೀನ್ ಗಂಟೆ (ಇಟಗಿ) ಮಂಜುನಾಥ ಕೆ.ಮಹಾಂತೇಶ (ಹಡಗಲಿ) ಅವರಿಗೂ ನೋಟಿಸ್‌ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.