ADVERTISEMENT

ವಿಜಯನಗರ | ಬಿಸಿಯೂಟ: ಮಕ್ಕಳ ಆರೋಗ್ಯದ ಕಾಳಜಿ ಮುಖ್ಯ

ಸಮನ್ವಯ ಸಮಿತಿ ಸಭೆಯಲ್ಲಿ ಸಿಇಓ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:35 IST
Last Updated 19 ಜುಲೈ 2025, 7:35 IST
ಮೊಹಮ್ಮದ್ ಅಲಿ ಅಕ್ರಂ ಷಾ
ಮೊಹಮ್ಮದ್ ಅಲಿ ಅಕ್ರಂ ಷಾ   

ಹೊಸಪೇಟೆ : ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟ ಶುಚಿ, ರುಚಿ, ಸ್ವಾಸ್ಥ್ಯದೊಂದಿಗೆ ಕೂಡಿರಬೇಕು, ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.

ಇಲ್ಲಿ ಶುಕ್ರವಾರ ಅತಿಸಾರ ಭೇದಿ ನಿಯಂತ್ರಣ ಕುರಿತು ಇಲಾಖೆಗಳ ನಡುವಿನ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ತೀವ್ರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದನ್ನು ಗುರಿಯಾಗಿಸಿ ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅತಿಸಾರ ಭೇದಿಯ ನಿಯಂತ್ರಣದ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ADVERTISEMENT

‘ಬೋರ್‌ವೆಲ್‌ನಿಂದ ಬರುವ ನೀರನ್ನು ಕುಡಿಯದೇ ಶುದ್ಧ ಕುಡಿಯುವ ನೀರಿನ ಘಟಕ ಅಥವಾ ಜೆಜೆಎಂನಿಂದ ಬರುವ ಶುದ್ದ ನೀರನ್ನು ಮಕ್ಕಳಿಗೆ ಕುಡಿಯವಂತೆ ಅರಿವು ಮೂಡಿಸಬೇಕು. ಬೋರ್‌ವೆಲ್ ಹಾಗೂ ಜೆಜೆಎಂ ನೀರಿನ ವ್ಯತ್ಯಾಸವನ್ನು ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು’ ಎಂದರು.

ಡಿಎಚ್‌ಒ ಡಾ.ಎಲ್‌.ಆರ್‌.ಶಂಕರ್ ನಾಯ್ಕ ಮಾತನಾಡಿ, ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದು, 1 ರಿಂದ 10ನೇ ತರಗತಿಯಲ್ಲಿ ದಾಖಲಾಗಿರುವ ಶಾಲಾ ಮಕ್ಕಳ ರಕ್ತಹೀನತೆಯನ್ನು ತಪಾಸಣೆ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಜುಲೈ.1 ರಿಂದ ಡಿಸೆಂಬರ್ 31 ರ ವರಗೆ ನಡೆಸಲಾಗುತ್ತದೆ ಎಂದರು.

10 ರಿಂದ 19 ವಯಸ್ಸಿನವರಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆಗೆ ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ. 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶದ ಮಾತ್ರೆ ಹಾಗೂ ಪೋಲಿಕ್ ಆಮ್ಲದ ಮಾತ್ರೆಯನ್ನು ನೀಡಲಾಗುವುದು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ಗೌಡ, ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಸತೀಶ್‌ಚಂದ್ರ ಇತರರು ಇದ್ದರು.

ಜಿಲ್ಲೆಯಲ್ಲಿ 5 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು 7 ಸಮುದಾಯ ಆರೋಗ್ಯ ಕೇಂದ್ರಗಳು, 49 ಪಿಎಚ್‌ಸಿಗಳು 5 ನಗರ ಆರೋಗ್ಯ ಕೇಂದ್ರಗಳು, 16 ನಮ್ಮ ಕ್ಲಿನಿಕ್‌ಗಳು

ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲದೆ 44 ಖಾಸಗಿ ಆರೋಗ್ಯ ಸಂಸ್ಥೆಗಳು 45 ಕ್ಕೂ ಹೆಚ್ಚು ಓಆರ್‌ಎಸ್ ಮತ್ತು ಜಿಂಕ್ ಕಾರ್ನರ್‌ಗಳನ್ನು ಸ್ಥಾಪಿಸಲಾಗಿದೆ ಆರೋಗ್ಯ ಕಾಳಜಿಯೇ ಎಲ್ಲದರ ಉದ್ದೇಶ

- ಮೊಹಮ್ಮದ್ ಅಲಿ ಅಕ್ರಂ ಷಾ ಜಿಪಂ ಸಿಇಒ

ರೋಗ ನಿರೋಧಕ ಶಕ್ತಿ  ‘ಡಿಟಿಎಫ್‌ಐ ಕಾರ್ಯಕ್ರಮದಿಂದ ಶಿಶುಗಳು ಮತ್ತು ಗರ್ಭಿಣಿಯರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ದಿನ ನಿತ್ಯದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವತ್ತ ಗಮನಹರಿಸಲಾಗುತ್ತದೆ. ಹೆಪಟೈಟಿಸ್-ಬಿ ರೋಟಾ ವೈರಸ್ ದಡಾರ ಪೋಲಿಯೊ ನ್ಯುಮೋನಿಯಾ ರುಬೆಲ್ಲಾ ಮುಂತಾದವುಗಳನ್ನು ನಿಗದಿತ ಲಸಿಕೆಗಳ ಮೂಲಕ ತಡೆಗಟ್ಟಬಹುದಾಗಿದೆ. ಜಿಲ್ಲೆಯಲ್ಲಿ ಲಸಿಕೆಯಿಂದ ವಂಚಿತರಾದ ಶಿಶುಗಳು ಮತ್ತು ಗರ್ಭಿಣಿಯರಿಗೆ ನಿಯಮಿತ ಲಸಿಕೆ ಮತ್ತು ಬೂಸ್ಟರ್ ಡೋಸ್‌ನ್ನು ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಒದಗಿಸಬೇಕು’ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.