ADVERTISEMENT

ಅಕ್ಷರ ಕಲಿಯಲು ಎತ್ತಿನ ಬಂಡಿ ಸವಾರಿ

ಶಾಲಾ ಪ್ರಾರಂಭೋತ್ಸವಕ್ಕೆ ಬಿಇಒ ಗಾಂಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:12 IST
Last Updated 29 ಮೇ 2018, 10:12 IST

ತಾಳಿಕೋಟೆ: ಅಲ್ಲಿ ಅಕ್ಷರ ಬಂಡಿ ಓಡುತ್ತಿತ್ತು. ಎತ್ತಿನ ಬಂಡಿ ಅಕ್ಷರ ಬಂಡಿಯಾಗಿತ್ತು. ಬಂಡಿಯ ತುಂಬ ಕನ್ನಡ ವರ್ಣಮಾಲೆಯ ಅಲಂಕಾರ. ಅದು ಎತ್ತುಗಳ ಮೇಲೆಯೂ ಒಡಮೂಡಿತ್ತು. ಬಂಡಿಯಲ್ಲಿ ವಿವಿಧ ವೇಷಭೂಷಣ ಹೊತ್ತ ಪುಠಾಣಿಗಳು ಅವರೊಂದಿಗೆ ಶಾಲಾ ಪಠ್ಯಪುಸ್ತಕಗಳು, ಬಂಡಿಗೆ ತೆಂಗಿನ ಗರಿ, ಎತ್ತುಗಳಿಗೆ ಹಾರ ತುರಾಯಿ ಅಲಂಕಾರ. ಅಕ್ಷರ ಬಂಡಿಯ ಸಾರಥಿಯಾಗಿದ್ದವರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ.ಗಾಂಜಿ ಇದ್ದರು.

ಇದು ನಡೆದದ್ದು ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶನಿವಾರವೇ ಮಾದರಿಯಾಗಿ ಅದ್ಧೂರಿ ಕಾರ್ಯಕ್ರಮವೊಂದನ್ನು ಶಿಕ್ಷಣ ಇಲಾಖೆ ಆಯೋಜಿಸಿತ್ತು.

ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ. ಅಕ್ಷರ ಬಂಡಿಯ ಹಿಂದೆ ಶಿಕ್ಷಕರು, ಗ್ರಾಮಸ್ಥರು, ಶಾಲಾ ಮಕ್ಕಳು ತಾಲ್ಲೂಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿ ಅಕ್ಷರ ಜಾತ್ರೆಯ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಅದ್ಧೂರಿಯಾಗಿ ನಾಂದಿ ಹಾಡಿದರು.

ADVERTISEMENT

ಮೆರವಣಿಗೆಯಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳು, ಮಕ್ಕಳನ್ನು ಶಾಲೆಗೆ ಕಳಿಸಿ ಎಂಬ ಘೋಷಣೆಗಳು, ಕೈಯ್ಯಲ್ಲಿ ಭಿತ್ತಿಪತ್ರದೊಂದಿಗೆ ಕನ್ನಡ, ಇಂಗ್ಲಿಷ್‌ ಅಕ್ಷರಗಳಿಂದ ಅಲಂಕೃತ ಕುಂಭಕಳಸ ಹೊತ್ತ ಶಾಲಾ ಮಕ್ಕಳು, ಡೊಳ್ಳುಕುಣಿತ, ನಗಾರಿ ಮಕ್ಕಳ ಲೇಜಿಮುಗಳಿಂದ ಗ್ರಾಮದ ಬೀದಿಯಲ್ಲಿ ಜಾತ್ರೆಯ ವಾತಾವರಣ ಮೂಡಿತ್ತು.

ಪ್ರಭಾತ ಪೇರಿ ಮೂಲಕ ಸರ್ಕಾರಿ ಶಾಲೆಗಳಲ್ಲಿ ದೊರೆವ ಶಾಲಾ ಸೌಲಭ್ಯಗಳ ಬಗ್ಗೆ ಕರ ಪತ್ರ ವಿತರಣೆ, ಪಾಳಕರ ಮನೆಮನೆ ತೆರಳಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವಂತೆ ಮನ ಒಲಿಸುವಿಕೆ, ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಕುಂಕುಮ ಹಚ್ಚಿ ಆರತಿ ಬೆಳಗಿ ಸ್ವಾಗತ,  ಶಾಲೆಯಲ್ಲಿ ಬಿಸಿಯೂಟ ಪ್ರಾರಂಭವಿಲ್ಲದಿದ್ದರೂ ಸ್ವಯಂಪ್ರೇರಿತರಾಗಿ ಶಿಕ್ಷಕರೇ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ, ಅತಿಥಿಗಳಿಗೆ ಸಿಹಿ ವಿತರಣೆ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಬೋಧನೆಯಲ್ಲಿ ಹಿಂದುಳಿದ ಸುಮಾರು 80 ವಿದ್ಯಾರ್ಥಿಗಳಿಗೆ ಬೇಸಿಗೆ ಅವಧಿಯಲ್ಲಿ ಉಚಿತವಾಗಿ ವಿಶೇಷ ತರಗತಿಗಳನ್ನು ನಡೆಸಿದ ಸ್ಥಳೀಯ ಅತಿಥಿ ಶಿಕ್ಷಕರಿಗೆ ಗೌರವ ಸನ್ಮಾನ ನಡೆಯಿತು. ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಪ್ರತಿ ಕೋಣೆಗಳು ಬಣ್ಣ, ಬಲೂನು, ತೆಂಗಿನ ಗರಿ,
ಮಾವಿನ ತೋರಣಗಳಿಂದ ಅಲಂಕೃತವಾಗಿದ್ದವು .

ಈ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ.ಗಾಂಜಿ ‘ತಾಲ್ಲೂಕಿನಲ್ಲಿ ತಮದಡ್ಡಿ ಗ್ರಾಮದ ಸರ್ಕಾರಿ ಶಾಲೆ ಮಾದರಿಯಾಗಿದೆ. ಗ್ರಾಮಸ್ಥರ ಸಹಕಾರದಿಂದ ಶಾಲೆಯ ವಾತಾವರಣವು ಆಹ್ಲಾದಕರವಾಗಿದ್ದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪರಿಶ್ರಮಿಸುತ್ತಿದ್ದಾರೆ. ತಾಲ್ಲೂಕಿನ ಪ್ರತಿ ಶಾಲೆಗಳು ಗ್ರಾಮಗಳು ಹೀಗೆ ಆಗಬೇಕೆಂಬುದೇ ನಮ್ಮ ಕನಸು’ ಎಂದರು.

‘ನಮ್ಮೂರ ಶಾಲೆಯಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ ಅವರಿಗೆ ಸಹಕರಿಸುವುದು ಗ್ರಾಮಸ್ಥರ ಕರ್ತವ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಸನಗೌಡ ಬಗಲಿ ಪ್ರತಿಕ್ರಿಯಿಸಿದರು.

ಶರಣಬಸಪ್ಪ ಶಿ. ಗಡೇದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.