ADVERTISEMENT

ಅಧೋಗತಿಯತ್ತ ನಗರಸಭೆ ಸಮುದಾಯ ಭವನ

ಗಣೇಶ ಚಂದನಶಿವ
Published 22 ಅಕ್ಟೋಬರ್ 2012, 5:40 IST
Last Updated 22 ಅಕ್ಟೋಬರ್ 2012, 5:40 IST

ವಿಜಾಪುರ: ಇಲ್ಲಿಯ ಬಾಗಲಕೋಟೆ ರಸ್ತೆಯಲ್ಲಿ ನಗರಸಭೆ ನಿರ್ಮಿಸಿರುವ ಬೃಹತ್ ಸಮುದಾಯ ಭವನ ಅಗತ್ಯ ನಿರ್ವಹಣೆಯ ಕೊರತೆಯಿಂದ ಅಧೋಗತಿಯತ್ತ ಸಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಜಲನಗರದಲ್ಲಿರುವ ನಗರಸಭೆಯ ವಿಶಾಲ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಿಸಿ ಕೆಲವೇ ಕೆಲವು ವರ್ಷಗಳಾಗಿವೆ. ಒಂದೆರಡು ಸರ್ಕಾರಿ ಕಾರ್ಯಕ್ರಮ, ಒಂದು ಬಾರಿ ನಗರಸಭೆಯ ಸಾಮಾನ್ಯ ಸಭೆ ಇಲ್ಲಿ ನಡೆದದ್ದನ್ನು ಬಿಟ್ಟರೆ ಈ ಸಮುದಾಯ ಭವನವನ್ನು ಮದುವೆ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುತ್ತಿದೆ.

ವಿಜಾಪುರ ನಗರಸಭೆಯ ಕಚೇರಿ ಸ್ಥಳ ಇಕ್ಕಟ್ಟಾಗಿದ್ದು, ಕೆಲವೊಂದು ವಿಭಾಗಗಳನ್ನು ಈ ಸಮುದಾಯ ಭವನಕ್ಕೆ ಸ್ಥಳಾಂತರಿಸಬೇಕು ಎಂದು ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗಿತ್ತು. ಕಚೇರಿಯ ಅರ್ಧ ಭಾಗ ಸ್ಥಳಾಂತರಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಕಾರಣಕ್ಕೆ ಆ ನಿರ್ಧಾರ ಕೈಬಿಡಲಾಗಿತ್ತು. ನಗರಸಭೆಯ ಹೊಸ ಆಡಳಿತ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದರಿಂದ ಈ ಸಮುದಾಯ ಭವನಕ್ಕೆ ಆರಂಭಕ್ಕೆ ರೂ.10 ಸಾವಿರ ಬಾಡಿಗೆ ಪಡೆದು ಖಾಸಗಿಯವರಿಗೆ ಮದುವೆ, ಸಮಾರಂಭಗಳಿಗೆ ಬಾಡಿಗೆ ನೀಡಲಾಗುತ್ತಿತ್ತು.

`ಈ ಭವನಕ್ಕೆ ಅಳವಡಿಸಿರುವ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಸ್ವಚ್ಛತೆಯೂ ಇಲ್ಲ. ಅಗತ್ಯ ನಿರ್ವಹಣೆಯೂ ಇಲ್ಲ. ಇದರಿಂದಾಗಿ ಆರಂಭದಲ್ಲಿಯೇ ಈ ಕಟ್ಟಡ ಅವಸಾನದತ್ತ ಸಾಗುತ್ತಿದೆ~ ಎಂಬುದು ಸಾರ್ವಜನಿಕರ ದೂರು.

`ಈ ಭವನ ಸುಸಜ್ಜಿತವಾಗಿಟ್ಟರೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಆದರೆ, ನಗರಸಭೆಯವರು ಕೇವಲ ಸಮುದಾಯ ಭವನವನ್ನು ಮಾತ್ರ ಬಾಡಿಗೆಗೆ ನೀಡುತ್ತಾರೆ. ಅದರ ಜೊತೆಗೆ ಯಾವುದೇ ಪಾತ್ರೆ, ಕುರ್ಚಿ ಮತ್ತಿತರ ಸಾಮಗ್ರಿ ನೀಡುವುದಿಲ್ಲ. ಈ ಸಮುದಾಯ ಭವನದಲ್ಲಿ ಇರುವಷ್ಟು ಪಾರ್ಕಿಂಗ್ ಜಾಗೆ ನಗರದ ಇತರ ಖಾಸಗಿ ಕಲ್ಯಾಣ ಮಂಟಪಗಳಿಗೆ ಇಲ್ಲ. ಇಲ್ಲಿಯ ಅವ್ಯವಸ್ಥೆ ಸರಿಪಡಿಸಿ ಸ್ಪರ್ಧಾತ್ಮಕವಾಗಿ ಸೌಲಭ್ಯ ಕಲ್ಪಿಸಲು ನಗರಸಭೆ ಮುಂದಾಗಬೇಕು~ ಎಂಬುದು ಅವರ ಮನವಿ.

`ಆರು ತಿಂಗಳ ಹಿಂದೆ ನಿರ್ವಹಣೆಗಾಗಿ ಕೆಲ ದಿನಗಳ ವರೆಗೆ ಬಾಡಿಗೆ ಕೊಡುವುದನ್ನು ನಿಲ್ಲಿಸಲಾಗಿತ್ತು. ಈಗ ಈ ಭವನ ಬಾಡಿಗೆಗೆ ಲಭ್ಯವಿದೆ. ಹಿಂದೆ ರೂ.10 ಸಾವಿರ ಇದ್ದ ಬಾಡಿಗೆಯನ್ನು ಈಗ ರೂ. 20 ಸಾವಿರಕ್ಕೆ ಹೆಚ್ಚಿಸಲಾಗಿದೆ~ ಎಂಬುದು ನಗರಸಭೆಯ ಅಧ್ಯಕ್ಷ ಪರಶುರಾಮ ರಜಪೂತ ಅವರ ವಿವರಣೆ.

`ನಮ್ಮ ಸಮುದಾಯ ಭವನಕ್ಕೆ ವಿದ್ಯುತ್ ಸಂಪರ್ಕ ಇದೆ. ಜನರೇಟರ್, ಪಾತ್ರೆ ಸೇರಿಂತೆ ಇತರ ಎಲ್ಲ ಅಗತ್ಯ ಉಪಕರಣಗಳನ್ನು ಬಾಡಿಗೆದಾರರೇ ತರಬೇಕು. ನಾವು ಕಟ್ಟಡವನ್ನು ಮಾತ್ರ ಬಾಡಿಗೆಗೆ ನೀಡುತ್ತೇವೆ. ಮದುವೆ ಅಥವಾ ಕಾರ್ಯಕ್ರಮ ಮುಗಿದ ನಂತರ ಇಡೀ ಭವನವನ್ನು ಸ್ವಚ್ಛಗೊಳಿಸಬೇಕು ಎಂಬ ಷರತ್ತು ಇದೆ~ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.