ADVERTISEMENT

ಅಪಾಯಕ್ಕೆ ಆಹ್ವಾನವೀಯುವ ಕಿರು ಸೇತುವೆ..!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:57 IST
Last Updated 28 ಅಕ್ಟೋಬರ್ 2017, 9:57 IST

ವಿಜಯಪುರ: ಅನಾಹುತ ಮರುಕಳಿಸಬಾರದು ಎಂಬ ಕಾಳಜಿಯಿಂದ ಹಳ್ಳಕ್ಕೆ ನಿರ್ಮಿಸಿದ ಸೇತುವೆಯೇ, ಇದೀಗ ಗ್ರಾಮಸ್ಥರಿಗೆ ಆತಂಕವಾಗಿ ಕಾಡುತ್ತಿದೆ. ಯಾವಾಗ ಅಪಾಯ ಸಂಭವಿಸುತ್ತದೆ ಎಂಬ ಅಂಜಿಕೆಯಿಂದ ದಿನ ದೂಡುವಂತೆ ಮಾಡಿದೆ.

ಕಿರಿದಾದ ಸೇತುವೆ. ಎರಡೂ ಬದಿ ತಡೆಗೋಡೆಯಿಲ್ಲ. ಎದುರಿಗೆ ವಾಹನ ಬಂದರೆ ಏಕಕಾಲಕ್ಕೆ ಚಲಿಸುವಂತಿಲ್ಲ. ಸೇತುವೆಯ ಮೇಲಿನ ವಾಹನ ತೆರಳಿದ ಮೇಲೆಯೇ ಮತ್ತೊಂದು ವಾಹನ ಚಲಿಸಬೇಕು. ಒಮ್ಮೆಲೇ ಎರಡು ಬದಿಯಿಂದ ವಾಹನ ಬಂದರೆ ಸಮಸ್ಯೆ ಉಲ್ಭಣ...

ಪಾದಚಾರಿಗಳು, ದ್ವಿಚಕ್ರ ವಾಹನ ಸಂಚರಿಸಲು ಇಂತಹ ಸಂದರ್ಭ ತ್ರಾಸು ಪಡಬೇಕು. ಸ್ವಲ್ಪ ಆಚೀಚೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ...ಇದು ಬಸವನಬಾಗೇವಾಡಿ ತಾಲ್ಲೂಕು ಕುದರಿ ಸಾಲವಾಡಗಿ, ಬೂದಿಹಾಳ ಗ್ರಾಮಗಳ ನಡುವೆ ಜನ–ವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ಸೇತುವೆಯ ದುಃಸ್ಥಿತಿ.

ADVERTISEMENT

ಸೇತುವೆ ನಿರ್ಮಾಣಕ್ಕೂ ಮುನ್ನ ದಿನಗಳಲ್ಲಿ ಒಮ್ಮೆ ಹಳ್ಳ ತುಂಬಿ ಹರಿಯುತ್ತಿದ್ದಾಗ ದಾಟಲು ಮುಂದಾದ ಇಬ್ಬರು, ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು. ಮಳೆಗಾಲದಲ್ಲಿ ಈ ಹಳ್ಳ ಬಹುತೇಕ ಅವಧಿ ತುಂಬಿ ಹರಿಯುತ್ತಿದ್ದರಿಂದ ಈ ಭಾಗದ ಜನರ ಮನವಿಗೆ ಸ್ಪಂದಿಸಿದ ಆಡಳಿತ, ಸೇತುವೆ ನಿರ್ಮಾಣಕ್ಕೆ ಮುಂದಾಯಿತು.

ಸ್ಥಳೀಯರ ಒತ್ತಡದಿಂದ ಸೇತುವೆಯೂ ನಿರ್ಮಾಣಗೊಂಡಿದೆ. ಆದರೆ ಇದು ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚಿಸಿದೆ ಎನ್ನುತ್ತಾರೆ ಬೂದಿಹಾಳ ನಿವಾಸಿ ದಯಾನಂದ ಬಾಗೇವಾಡಿ. ‘ಸೇತುವೆ ನಿರ್ಮಾಣಕ್ಕೂ ಮೊದಲು ಮಳೆಗಾಲದಲ್ಲಿ ಮಾತ್ರ ಭಯದಿಂದ ಸಂಚರಿಸುತ್ತಿದ್ದೆವು. ಕೆಲವೊಮ್ಮೆ ಬದಲಿ ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದೆವು. ಇದೀಗ ಲಕ್ಷ, ಲಕ್ಷ ವ್ಯಯಿಸಿ ಸೇತುವೆ ಕಟ್ಟಿಸಿದರೂ ನಿತ್ಯ ಭಯದಿಂದ ಓಡಾಟ ನಡೆಸಬೇಕಿದೆ’ ಎಂದು ಅವರು ಹೇಳಿದರು.

‘ಸೇತುವೆ ಮೇಲೆ ಸಂಚರಿಸುವಾಗ ಎದುರಿಗೆ ವಾಹನ ಬಂದರೆ ಸರಾಗವಾಗಿ ಸಾಗುವಂತೆ ವಿಸ್ತಾರವಾದ ಸೇತುವೆ ನಿರ್ಮಿಸಬೇಕಿತ್ತು. ಕಾಟಾಚಾರಕ್ಕೆ ಎಂಬಂತೆ ಚಿಕ್ಕದಾಗಿ ನಿರ್ಮಿಸಿದ್ದಾರೆ. ಎರಡೂ ಬದಿ ತಡೆಗೋಡೆ ಸಹ ಇಲ್ಲ. ಇದರಿಂದ ನಿತ್ಯ ಸೇತುವೆ ಮೇಲೆ ಜೀವ ಭಯದಿಂದಲೇ ಸಂಚರಿಸಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಅಪಾಯಕಾರಿ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ದಯಾನಂದ.

‘ಶಾಲೆ–ಕಾಲೇಜಿಗಾಗಿ ನಿತ್ಯ ಯಾಳವಾರ, ಕಾಮನಕೇರಿ, ಗುಳಬಾಳ, ಬೂದಿಹಾಳ ಗ್ರಾಮದ ಅಪಾರ ಸಂಖ್ಯೆಯ ಮಕ್ಕಳು ಕಿರಿದಾದ ಸೇತುವೆ ಮೇಲೆ ಸಂಚರಿಸಬೇಕು. ಸ್ವಲ್ಪ ಯಾಮಾರಿದರೂ ಅವಘಡ ನಡೆಯುವುದು ಗ್ಯಾರಂಟಿ. ಸೇತುವೆ ನಿರ್ಮಾಣದ ಪೂರ್ವದಲ್ಲಿ ಹಳ್ಳ ಹರಿಯುವಾಗ ಭಯವಿತ್ತು. ಇದೀಗಲೂ ಅದೇ ಭಯವಿದೆ.

ಸೇತುವೆ ಮೇಲೆ ಚಲಿಸುತ್ತಿರುವ ವಾಹನ ದಡ ಮುಟ್ಟುವವರೆಗೂ ಎದುರಿನ ವಾಹನ ಮತ್ತೊಂದು ದಂಡೆ ಮೇಲೆ ನಿಂತುಕೊಳ್ಳಬೇಕು. ನಿರ್ಲಕ್ಷ್ಯದಿಂದ ವಾಹನ ಚಾಲಕರು ಸೇತುವೆ ಮೇಲೆ ವಾಹನ ಚಲಾಯಿಸಿದರೆ ಅನಾಹುತ ತಪ್ಪಿದ್ದಲ್ಲ. ಅವಘಡ ಸಂಭವಿಸುವ ಪೂರ್ವದಲ್ಲೇ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಸಾಧ್ಯವಾದರೆ ಸೇತುವೆ ವಿಸ್ತರಿಸಬೇಕು’ ಎಂದು ಕುದರಿ ಸಾಲವಾಡಗಿಯ ವಿಜಯಕುಮಾರ ದೇಸಾಯಿ ಆಗ್ರಹಿಸುತ್ತಾರೆ.

ಬಾಬುಗೌಡ ರೋಡಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.