ADVERTISEMENT

ಅರ್ಧಕ್ಕೆ ನಿಂತ ದೇವರಹಿಪ್ಪರಗಿ ಮಾಚಿದೇವ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 8:17 IST
Last Updated 19 ಏಪ್ರಿಲ್ 2013, 8:17 IST

ಸಿಂದಗಿ: 12ನೇ ಶತಮಾನದ ಶರಣ ಶ್ರೇಷ್ಠ, ಕಾಯಕನಿಷ್ಠ, ವಚನ ಸಾಹಿತ್ಯ ಭಂಡಾರ ರಕ್ಷಕ ತಾಲ್ಲೂಕಿನ ದೇವರಹಿಪ್ಪರಗಿ ಮಡಿವಾಳ ಮಾಚಿದೇವರ ಜಾತ್ರಾ ರಥೋತ್ಸವ ಬುಧವಾರ ದೇವರಹಿಪ್ಪರಗಿ ಪಟ್ಟಣದಲ್ಲಿ ಆರಂಭಗೊಂಡು ಅರ್ಧಕ್ಕೆ ನಿಂತಿತು.

ಆರಂಭದಲ್ಲಿ ರಥದ ಸುತ್ತ ಉತ್ಸವ ಮೂರ್ತಿ ಪಲ್ಲಕ್ಕಿ ಪ್ರದಕ್ಷಿಣೆಯಾಯಿತು. ಸುಮಂಗಲೆಯರು ಕಳಸದಾರುತಿ ಬೆಳಗಿದರು. ನಂತರ ಗದ್ದುಗೆಮಠದ ಪೀಠಾಧೀಶರು ರಥಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು `ಹರ ಹರ ಮಹಾದೇವ', `ಮಾಚಿದೇವ ಬಹುಪರಾಕ' ಎಂಬ ವೇದ ಘೋಷದೊಂದಿಗೆ ರಥ ಎಳೆದರು.

ಭಕ್ತರು ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆಯುತ್ತಿರುವುದು ಕಂಡು ಬಂದಿತು.

ರಥ ಸಾಗುವ ರಸ್ತೆಯನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿದ್ದರಿಂದ ರಥ ಸ್ವಲ್ಪ ಮುಂದೆ ಸಾಗಿ ಮಧ್ಯದಲ್ಲಿ ನಿಂತುಕೊಂಡಿತು. ಹೀಗಾಗಿ ರಥವನ್ನು ಅರ್ಧಕ್ಕೆ ನಿಲ್ಲಿಸುವುದು ಅನಿವಾರ್ಯವಾಯಿತು. ರಥ ಅರ್ಧಕ್ಕೆ ನಿಂತಿರುವುದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದರು. ರಥೋತ್ಸವದಲ್ಲಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಅಪಾರ ಸಂಖ್ಯೆಯಲ್ಲಿ ಭಕ್ತ ವೃಂದ ಪಾಲ್ಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.