ADVERTISEMENT

ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 5:41 IST
Last Updated 4 ಜುಲೈ 2013, 5:41 IST

ಆಲಮಟ್ಟಿ: ಹೆರಿಗೆಯಾದ ಮರುಗಳಿಗೆಯೇ ಮಗು ಅಸು ನೀಗಿದ್ದು ಇದಕ್ಕೆ ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಗೊಳಸಂಗಿಯಲ್ಲಿ ಜರುಗಿದೆ.

ಮಂಗಳವಾರ ಮಧ್ಯರಾತ್ರಿ ರೂಪಾ ಮಹಾದೇವ ಮನಗೂಳಿ ಎಂಬ ಗರ್ಭಿಣಿ ಹೆರಿಗೆಗಾಗಿ ಬಂದಾಗ ಆಸ್ಪತ್ರೆ ಮತ್ತು ವಸತಿಗೃಹದಲ್ಲಿ ವೈದ್ಯಾಧಿಕಾರಿ ಸೇರಿದಂತೆ ಯಾವ ಸಿಬ್ಬಂದಿಯೂ ಅಲ್ಲಿರಲಿಲ್ಲ. ಹೆರಿಗೆ ನೋವು ತೀವ್ರವಾದಾಗ ಹತ್ತಿರದಲ್ಲಿಯೇ ಇರುವ ಕಿರಿಯ ಆರೋಗ್ಯ ಸಹಾಯಕಿ ಅವರನ್ನು ಮನೆಗೆ ಕರೆಯಲು ಹೋದರೂ ಬರಲಿಲ್ಲ, ಹೀಗಾಗಿ ಆಸ್ಪತ್ರೆ ಗೇಟ್ ಹೊರಗೇ ಗ್ರಾಮಸ್ಥರ ಸಹಕಾರದಲ್ಲಿ ಹೆರಿಗೆ ಆಯಿತು ಎಂದು ಕುಟುಂಬ ವರ್ಗದವರು ಆರೋಪಿಸಿದರು.

ತಾಯಿಗೆ ತೀವ್ರ ರಕ್ತಸ್ರಾವವಾಗಿ ಹುಟ್ಟಿದ ಗಂಡು ಮಗು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು. ಆರೋಗ್ಯ ಸಹಾಯಕಿ ಸಕಾಲಕ್ಕೆ ಆಸ್ಪತ್ರೆಗೆ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ಆರೋಗ್ಯ ಸಹಾಯಕಿ ಮತ್ತು ಆಸ್ಪತ್ರೆಯ ಹಿರಿಯ ಸಿಬ್ಬಂದಿಯನ್ನು ಇಲ್ಲಿಂದ ವರ್ಗಾವಣೆ ಮಾಡುವವರೆಗೂ ಬೀಗ ಹಾಕಿ ಪ್ರತಿಭಟಿಸಲಾಗುವುದೆಂದು ಆಕ್ರೋಶಗೊಂಡ ಗ್ರಾಪಂ ಅಧ್ಯಕ್ಷ ಸುರೇಶ ದಳವಾಯಿ, ತಾಪಂ ಸದಸ್ಯ ಬಂದೇನವಾಜ್ ಡೋಲಚಿ, ಹುಚ್ಚಪ್ಪ ಕಮತಗಿ ಸೇರಿದಂತೆ ನೂರಾರು ಗ್ರಾಮಸ್ಥರು ಆಗ್ರಹಿಸಿದರು.

ಆರೋಗ್ಯ ಸಹಾಯಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಗ್ರಾಮದ ಮಹಿಳೆಯರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗ್ರಾ.ಪಂ.ನಿಂದ ಪರಿಹಾರ: ಮಗುವನ್ನು ಕಳೆದುಕೊಂಡ ರೂಪಾ ಮನಗೂಳಿ ಅವರಿಗೆ ಗೊಳಸಂಗಿ ಗ್ರಾಮ ಪಂಚಾಯ್ತಿಯಿಂದ 10,101 ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದೆಂದು ಗ್ರಾಪಂ ಅಧ್ಯಕ್ಷ ಸುರೇಶ ದಳವಾಯಿ ತಿಳಿಸಿದ್ದಾರೆ. ನೊಂದ ಬಾಣಂತಿಗೆ ಪಿಎಸ್.ಐ. ಎಂ.ಎನ್. ಸಿಂಧೂರ 1001 ರೂಪಾಯಿ ನೀಡಿ ಮಾನವೀಯತೆ ಮೆರೆದರು.

ಸಿಬ್ಬಂದಿ ವರ್ಗಾವಣೆ; ಆರೋಗ್ಯಾಧಿಕಾರಿಗಳ ಭರವಸೆ: ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರನ್ನು ಶೀಘ್ರವೇ ಬೇರೆ ಕಡೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಗುಂಡಪ್ಪ ಗೊಳಸಂಗಿಯಲ್ಲಿ ಭರವಸೆ ನೀಡಿದ ಬಳಿಕ ಆಸ್ಪತ್ರೆ ಬೀಗ ತೆರೆಯಲಾಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶೋಭಾ ಗುಂಡಬಾವಡಿ, ಸ್ಥಳೀಯ ವೈದ್ಯ ಡಾ ಬಿ.ಆರ್. ಅರಕೇರಿ, ಪಿಎಸ್‌ಐ ಎಂ.ಎನ್. ಸಿಂಧೂರ, ಪ್ರಮುಖರಾದ ತಜಮುಲಖಾದ್ರಿ ಜಾಗೀರದಾರ, ತಾಪಂ ಸದಸ್ಯ ಬಂದೇನವಾಜ ಡೋಲಚಿ, ಹುಚ್ಚಪ್ಪ ಕಮತಗಿ, ಅಶೋಕ ಪರಮಗೊಂಡ, ಮುರಗೇಶ ಹೆಬ್ಬಾಳ, ಗೋವಿಂದ ಜಾಧವ, ವಿರೇಶ ಕೊಪ್ಪದ, ಕಾಶೀಮಸಾಬ ಸೋಲಾಪುರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.