ADVERTISEMENT

ಆಲಮಟ್ಟಿ: ನೀರು ಸಂಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 5:50 IST
Last Updated 29 ಜೂನ್ 2011, 5:50 IST
ಆಲಮಟ್ಟಿ: ನೀರು ಸಂಗ್ರಹ ಆರಂಭ
ಆಲಮಟ್ಟಿ: ನೀರು ಸಂಗ್ರಹ ಆರಂಭ   

ಆಲಮಟ್ಟಿ: ಒಂದು ವಾರದಿಂದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿ ಯುತ್ತಿದ್ದು,  ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಲ್ಲಿ ಹೆಚ್ಚಳವಾಗಿದೆ.

ಜೂನ್ 15ರಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಮಂಗಳವಾರ ಜಲಾಶಯಕ್ಕೆ 18,994 ಕ್ಯೂಸೆಕ್ ನೀರು ಹರಿದು ಬಂದಿದ್ದು, 519.6 ಮೀ. ಎತ್ತರದ ಜಲಾಶಯ ದಲ್ಲಿ  514.17 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಈವರೆಗೆ ಅಂದಾಜು 55 ಟಿಎಂಸಿಯಷ್ಟು ನೀರು   ಸಂಗ್ರಹವಾಗಿದೆ.

ಕಳೆದ ವರ್ಷ (2010ರ ಜೂನ್ 28) ಇದೇ ದಿನ ಜಲಾಶಯದಲ್ಲಿ 513.80 ಮೀ. ವರೆಗೆ ನೀರು ಸಂಗ್ರಹ ವಾಗಿತ್ತು. ಆಗ ಕೇವಲ 4,700 ಕ್ಯೂಸೆಕ್‌ಗಳಷ್ಟು ನೀರು ಹರಿದು ಬಂದಿತ್ತು.  2009ರಲ್ಲಿ ಮುಂಗಾರಿನ ತೀವ್ರ ಕೊರತೆ ಅನುಭವಿಸಿದ್ದರಿಂದ ಜುಲೈ ಎರಡನೇ ವಾರದಿಂದ ಜಲಾಶ ಯಕ್ಕೆ ನೀರು ಹರಿದು ಬರುತ್ತಿತ್ತು.

ಈ ಬಾರಿ ರಾಜ್ಯ ಹಾಗೂ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದವಾರ ಉತ್ತಮ ಮಳೆ ಸುರಿದ ಪರಿಣಾಮ ಜೂನ್ ಎರಡನೇ ವಾರದಿಂದಲೇ ನೀರು ಬರುತ್ತಿದೆ. ಇದೇ ರೀತಿ ನೀರು ಹರಿದು ಬಂದಲ್ಲಿ ಮುಂದಿನ ತಿಂಗಳೊಳಗೆ ಜಲಾಶಯ ಸಂಪೂರ್ಣ ಭರ್ತಿಯಾಗ ಲಿದೆ.  ಈಗ ಜಲಾಶಯದ ಎಲ್ಲ 26 ಗೇಟ್‌ಗಳನ್ನು ಮುಚ್ಚಲಾಗಿದೆ.  ಜುಲೈ ಎರಡನೇ ವಾರದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ರೈತರ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಆಗ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. 

ಮಹಾರಾಷ್ಟ್ರ  ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದಾಗ ಮಾತ್ರ ಕೃಷ್ಣಾ ನದಿಯ ಉಪನದಿಗಳಾದ ಘಟಪ್ರಭಾ, ಕೊಯ್ನಾ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳು ತುಂಬಿ ಮಹಾರಾಷ್ಟ್ರದ ಕೃಷ್ಣಾ ನದಿ ಮತ್ತು ಕೃಷ್ಣಾ ನದಿಯ ಉಪನದಿಗಳಿಗೆ ಕಟ್ಟಿದ ಜಲಾಶಯಗಳು (ಕೊಯ್ನಾ ಮತ್ತು ರಾಜಾಪುರ ಬ್ಯಾರೇಜ್) ಭರ್ತಿಯಾಗುತ್ತವೆ.
 
ಈ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟಾಗ ಮಾತ್ರ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಮಹಾರಾಷ್ಟ್ರದ ಸಾಂಗ್ಲಿ, ಕರಾಡ, ಸಾತಾರಾ, ಮಹಾಬಳೇಶ್ವರ ಬೆಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದರೇ ಮಾತ್ರ ಕೃಷ್ಣಾ ನದಿಗೆ ಮಹಾಪೂರ ಬರುವ ಸಾಧ್ಯತೆ ಹೆಚ್ಚು.

ಜಲವಿದ್ಯುತ್ ಸ್ಥಗಿತ: 90 ಮೆಗಾವ್ಯಾಟ್ ಸಾಮರ್ಥ್ಯದ ಆಲಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟವು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಆಲಮಟ್ಟಿ ಜಲಾಶಯ ಭರ್ತಿಯಾದ ನಂತರ ಮತ್ತೆ ಉತ್ಪಾದನೆ ಆರಂಭವಾಗಲಿದೆ.
ಈ ಬಾರಿ ಜಲಾಶಯಕ್ಕೆ ನಿರೀಕ್ಷೆಗೆ ಮೊದಲೇ ನೀರು ಹರಿದು ಬರುತ್ತಿರುವುದರಿಂದ ಜುಲೈ ಮೂರನೇ ವಾರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.