ಆಲಮಟ್ಟಿ: ಸಮೀಪದ ಅಂಗಡಗೇರಿ ಗ್ರಾಮದ ಕೆಲ ಕುಟುಂಬಗಳ ಮೇಲೆ ನಡೆಯುತ್ತಿದ್ದ ಭಾನಾಮತಿ ಪ್ರಕರಣ ಮತ್ತೇ ಮುಂದುವರೆದಿದ್ದು, ಹಲವಾರು ಬೆಂಕಿಯ ಪ್ರಕರಣಗಳು ನಡೆದಿವೆ.
ಮನೆಯ ಹೊರ ಆವರಣದಲ್ಲಿಟ್ಟಿದ್ದ ಆಹಾರದ ಸಾಮಗ್ರಿಗಳಿಗೆ, ಕಾಳು ಕಡಿಗಳಿಗೆ ಮತ್ತು ಹೊಲದಲ್ಲಿದ್ದ ಕನಕಿಯ ರಾಶಿಗೆ ಬೆಂಕಿ ತಗುಲಿದೆ. ಇದರಿಂದಾಗಿ ಮತ್ತಷ್ಟು ಹೆದರಿಕೆ ಈ ಕುಟುಂಬವನ್ನು ಆವರಿಸಿದ್ದು, ಆ ಮೂರು ಕುಟುಂಬಗಳು ಬೀದಿಯಲ್ಲಿಯೇ ವಾಸ ಮಾಡತೊಡಗಿವೆ. ಪ್ರತಿ ಹಾಸಿಗೆಯ ಮೇಲೆಯೂ ಸೀಮೆಎಣ್ಣೆಯ ವಾಸನೆ ಬರುತ್ತದೆ. ವಿಚಿತ್ರ ಎಂದರೇ ಮನೆಯಲ್ಲಿ ಸೀಮೆ ಎಣ್ಣೆಯ ಸಂಗ್ರಹವೇ ಇಲ್ಲ. ಪ್ರತಿ ಬಾರಿಯೂ ಸುಟ್ಟ ನಂತರ ಸೀಮೆ ಎಣ್ಣೆಯ ವಾಸನೆ ಹೆಚ್ಚಳವಾಗುತ್ತದೆ.
ರಾಸಾಯನಿಕ ಕ್ರಿಯೆ: ಭಾನಾಮತಿ ಪೀಡಿತ ಜನರ ಸಮೀಪವೇ ವಾಸವಾಗಿರುವ ಅಥವಾ ಅದೇ ಪ್ರದೇಶದಲ್ಲಿ ವಾಸವಾಗಿರುವ ಜನರು ಪೊಟ್ಯಾಷಿಯಂ ಪರ್ಮಾಂಗನೇಟ್ ಅನ್ನು ಗ್ಲಿಸರಿನ್‌ನೊಂದಿಗೆ ಬೆರೆಸಿ ಸೆಗಣಿ ಅಥವಾ ಮಣ್ಣಿನ ಮುದ್ದೆಯೊಂದಿಗೆ ಇಟ್ಟರೇ ಅದು ಸ್ವಲ್ಪ ಸಮಯದ ನಂತರ ಅಲ್ಲಿ ಬೆಂಕಿ ಕಾಣಿಸುವುದು. ಇಲ್ಲವೇ ಬಟ್ಟೆ ಅಥವಾ ಮನೆಯ ಯಾವುದಾದರೂ ವಸ್ತುವಿನ ಮೇಲೆ ಸೋಡಿಯಂ ಪುಡಿ ಉದುರಿಸಿದರೂ ಕೆಲ ಸಮಯದ ನಂತರ ಅಲ್ಲಿ ಬೆಂಕಿ ಕಾಣಿಸುತ್ತದೆ ಇಲ್ಲಿ ಗಮನಿಸಬೇಕಾದ ಅಂಶವೆಂದರೇ ಬಾಧಿತ ಜನರ ಸಮೀಪವೇ ಎಲ್ಲಾ ಪ್ರಕ್ರಿಯೆಗಳು ಜರಗುವುದು. ಎಲ್ಲ ಅವಘಡಗಳ ಹಿಂದೆ ವಿಜ್ಞಾನದ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಜನರು ಭ್ರಮಾಧೀನರಾಗಿ ಸಮೂಹ ಸನ್ನಿಗೆ ಒಳಗಾಗುವುದೂ ಇದಕ್ಕೆ ಕಾರಣ ಎನ್ನುತ್ತಾರೆ ವಿಜ್ಞಾನ ಲೇಖಕ ನಾರಾಯಣ ಬಾಬಾನಗರ.
ಬೆಂಕಿ ಹೊತ್ತಿಕೊಳ್ಳವುದು, ಕಲ್ಲು ಬೀಳುವುದರ ಹಿಂದೆ ರಾಸಾಯನಿಕ ಸಂಯೋಜನೆಯ ಪ್ರಕ್ರಿಯೆ ಜೊತೆಗೆ ವ್ಯಕ್ತಿಯೊಬ್ಬರ ಕೈಚಳಕ ಕೆಲಸ ಮಾಡಿದೆ ಎನ್ನುವುದು ಜಿಲ್ಲಾ ವಿಜ್ಞಾನ ಸಮಿತಿಯ ಸದಸ್ಯ ಶರಣು ಹೀರಾಪೂರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.